ರಂಗಭೂಮಿಯಲ್ಲಿ ರೇವಣ್ಣ ಎರೆಹುಳುವಿನಂತೆ ಕೆಲಸ: ಜಿ.ಎನ್. ಮೋಹನ್

rEVANNA
Published on

ಬೆಂಗಳೂರು: ಮಣ್ಣನ್ನು ಉತ್ತಿ ಬಿತ್ತಿ ಕೃಷಿಗೆ ಭೂಮಿಯನ್ನು ಹದ ಮಾಡಲು ಸಹಕಾರಿಯಾಗುವ ಎರೆಹುಳುಗಳಂತೆ ಕೆ. ರೇವಣ್ಣ ಅವರು ರಂಗಭೂಮಿಯಲ್ಲಿ ಮೌನಕ್ರಾಂತಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಾಂಸ್ಕೃತಿಕ ಪರಿಚಾರಕ ಕೆ. ರೇವಣ್ಣ ಅಭಿನಂದನಾ ಸಮಿತಿ ಅಧ್ಯಕ್ಷ ಜಿ.ಎನ್. ಮೋಹನ್ ಬಣ್ಣಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸಾಂಸ್ಕೃತಿಕ ಪರಿಚಾರಕ ಕೆ. ರೇವಣ್ಣ ಅಬಿನಂದನಾ ಸಮಿತಿ ಹಮ್ಮಿಕೊಂಡಿದ್ದ ‘ರೇವಣ್ಣ-60’ ರಂಗ ಭಾಗವತನಿಗೆ ಬಾಗಿನ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಹಿಂದೆ ನಿಂತು ಬೆನ್ನು ತಟ್ಟುವರರು ಕಡಿಮೆ. ಈ ನೆಲೆಗಟ್ಟಿನಲ್ಲಿ ರೇವಣ್ಣ ಅವರು ಭಿನ್ನವಾಗಿ ಕಾಣುತ್ತಾರೆ. ಮೊದಲು ಮಾನವನಾಗಿ ನಂತರ ರಂಗಕರ್ಮಿ ಸಾಧಕನಾಗಿ ಎಲ್ಲರನ್ನು ಒಗ್ಗಟ್ಟಾಗಿ ಕೊಂಡೊಯ್ಯುವ ಮನಸ್ಥಿತಿಯುಳ್ಳವರಾಗಿದ್ದಾರೆ. ರೇವಣ್ಣ ಅವರ ಉತ್ಸಾಹಕ್ಕೆ ಈ ಸಮಾರಂಭವು. ‘ಗರಿ’ ಮೂಡಿಸಿದೆ ಎಂದರು.

ಹಿರಿಯ ಸಾಹಿತಿ ಡಾ. ಎಲ್. ಹನುಮಂತಯ್ಯ ಮಾತನಾಡಿ, ರಂಗಭೂಮಿಯಲ್ಲಿ ತಾವು ತೊಡಗಿಸಿಕೊಳ್ಳುವ ಜತೆಗೆ ಮಡದಿ, ಮಕ್ಕಳು, ಬಂಧುಗಳನ್ನು ಸಹ ಸೇರಿಸಿಕೊಂಡಿರುವುದು ಅಪರೂಪದ ವ್ಯಕ್ತಿತ್ವ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಳಕಳಿ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ‘ರಂಗಭೂಮಿಯ ರಾವಣ’ ಎಂದು ಕರೆಯುತ್ತೇವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಿ ಅನುದಾನ ಪಡೆಯುತ್ತಿರುವವರ ನಡುವೆ ಕಳೆದ 25 ವರ್ಷದಲ್ಲಿ ಅನುದಾನಕ್ಕಾಗಿ ಅನುದಾನವನ್ನೇ ಪಡೆಯದಿರುವುದು ಕೂಡ ಸಾಧನೆಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ರಂಗ ಭಾಗವತ ಅಭಿನಂದನಾ ಕೃತಿಯ ಸಂಪಾದಕ ರಾಜು ಮಳವಳ್ಳಿ ಉಪಸ್ಥಿತರಿದ್ದರು.

ಜನರು ಮಾತನಾಡುವುದಕ್ಕೆ ಹೆಚ್ಚು ಗಮನಹರಿಸಬೇಡಿ. ಸದ್ದಿಲ್ಲದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ ಎಂದು ಈ ಹಿಂದೆ ರೇವಣ್ಣ ಅವರಿಗೆ ತಿಳಿಸಿದ್ದೆ. ಈ ಕೆಲಸವನ್ನು ಚಾಚುತಪ್ಪದೆ ಕೆಲಸ ಮಾಡುತ್ತಿದ್ದಾರೆ. - ಡಾ. ವಿಜಯಾ, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net