

ಹೊಳೆನರಸೀಪುರ: ಕರ್ತವ್ಯ ವಿಚಾರದಲ್ಲಿ ಅಸಡ್ಡೆ ಮನೋಭಾವನೆ ತೋರಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧಿಕಾರಿ ಮುನಿಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯನಿರ್ವಹಣೆ ವಿಚಾರದಲ್ಲಿ ತಾಪಂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರಸ್ತುತ ಕಾಮಗಾರಿಗಳಲ್ಲಿ ಲೋಪ ಎದ್ದು ಕಾಣುತ್ತಿದೆ. ಪರ್ಸಂಟೇಜ್ ರೂಪದಲ್ಲಿ ಹಣ ಪಡೆದು ಮತ್ತೊಬ್ಬರಿಗೆ ಲಕ್ಷಾಂತರ ರೂ. ಅಂದಾಜು ಪಟ್ಟಿ ನೀಡಿ ಕಾಮಗಾರಿ ನಡೆಸುವ ಮೂಲಕ ಭ್ರಷ್ಟಾಚಾರಕ್ಕೆ ನಾಂದಿ ಹಾಡಲಾಗುತ್ತಿದೆ. ಹಾಗಾಗಿ ನೀವು ನಡೆಸುತ್ತಿರುವ ಕಾಮಗಾರಿಗಳ ವಿವರ ನೀಡಿ ಎಂದು ತಾಕೀತು ಮಾಡಿದರು.
ಹರಿಹರಪುರ ಪಂಚಾಯಿತಿಯಲ್ಲಿ 40 ಲಕ್ಷ ರೂ. ಕಾಮಗಾರಿಗೆ 10 ಕೋಟಿ ರೂ.ಗಳ ವರ್ಕ್‌ಡನ್ ಸರ್ಟಿಫಿಕೇಟ್ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಶಾಸಕರು, ಯಾವ ಇಲಾಖೆಯಲ್ಲಿ ಈ ರೀತಿ ಇದೆ ಎಂದು ತಿಳಿಸಬೇಕು. ನಿಮಗೆ ಬೇಕಾದಂತೆ ಬೇಕಾದವರಿಗೆ ಕಾಮಗಾರಿ ಕೊಡಲು ಮನಸ್ಸಿಗೆ ಬಂದಂತೆ ಕಾನೂನು ಮಾಡುತ್ತಿದ್ದೀರಿ ಎಂದು ತಾಲೂಕು ಪಂಚಾಯಿತಿ ಇಒ ಮುನಿಸ್ವಾಮಿ ವಿರುದ್ಧ ಕಿಡಿಕಾರಿದರು.
ನಾನು ಲೋಕೋಪಯೋಗಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೂ ಇಲಾಖೆಯ ನಿಯಮಗಳ ಅರಿವಿದೆ. ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ ಸರ್ಟಿಫಿಕೇಟ್ ತನ್ನಿ ಎಂದು ಗುತ್ತಿಗೆದಾರರಿಗೆ ಬೇಕಾಬಿಟ್ಟಿ ಮಾಹಿತಿ ನೀಡುತ್ತ ಲೋಪ ಎಸಗುತ್ತಿದ್ದೀರಿ. ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆಗೆ ಒಂದು ಕಾನೂನು, ತಾಲೂಕು ಪಂಚಾಯಿತಿಗೆ ಒಂದು ಕಾನೂನಾ ಎಂದು ಗದರಿಸಿದರಲ್ಲದೆ, ಈ ಸಂಬಂಧ ಲೋಕಾಯುಕ್ತಗೆ ಅರ್ಜಿ ಬರೆದು ತನಿಖೆ ಮಾಡಿಸುತ್ತೇನೆ ಎಂದು ಎಚ್ಚರಿಸಿದರು.
ಕಾಮಗಾರಿಗಳಲ್ಲಿ ಯಾವುದೇ ರೀತಿಯ ಲೋಪ ಎಸಗಿಲ್ಲ. ಎಲ್ಲವೂ ಕಾನೂನು ಬದ್ಧವಾಗಿ ನಡೆದಿದೆ. ಇಲಾಖೆ ನಿಯಮಾಸುಸಾರವಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಇಒ ಮುನಿಸ್ವಾಮಿ ಸಮಜಾಯಿಷಿ ನೀಡಲು ಮುಂದಾದಾಗ, ಶಾಸಕರು ಅಧಿಕಾರಿ ವಿರುದ್ಧ ಮತ್ತಷ್ಟು ಕೆಂಡಾಮಂಡಲವಾದರು. ಬಳಿಕ ಜಿಲ್ಲಾ ಪಂಚಾಯಿತಿಯ ಸಿಇಒ ಅವರಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ನಡೆಯಬೇಕು. ನರೇಗಾ ಕಾಮಗಾರಿಗಳನ್ನೂ ಒಂದೇ ಗ್ರಾಮಕ್ಕೆ ಹೆಚ್ಚು ಕೊಡದೆ ಎಲ್ಲ ಗ್ರಾಮಗಳಿಗೂ ಕೊಡುವ ಮೂಲಕ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಅಧಿಕಾರಿಗಳು ತಾರತಮ್ಯ ನಡೆಸದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ವೈ.ಎಂರೇಣುಕುಮಾರ್ ಇತರರು ಇದ್ದರು.