ಶಾಲಾ ಬಸ್‌ನಲ್ಲೇ ಬೋಧನೆ ; ರೇವಾ ವಿವಿಯ ‘ಎಜುಕೇಶನ್ ಆನ್ ವೀಲ್ಸ್’ ಪ್ರಾರಂಭ

22TMK_REVA_PC
Published on

ತುಮಕೂರು : ‘ಸಮಾಜಕ್ಕೆ ಮರಳಿ ನೀಡಲು’ ಧ್ಯೇಯದೊಂದಿಗೆ 2004ರಲ್ಲಿ ರೇವಾ ವಿಶ್ವವಿದ್ಯಾಲಯ ಸ್ಥಾಪಿತವಾಗಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ನಡೆಸುತ್ತಿದೆ ಎಂದು ರೇವಾ ವಿವಿ ಕುಲಸಚಿವ ಡಾ.ಎನ್.ರಮೇಶ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮಾದರಿಯ ಕಲಿಕೆಗಾಗಿ ತಂತ್ರಾಂಶ ಅಭಿವೃದ್ಧಿಪಡಿಸಿ, ಬಸ್‌ಗೆ ಅಳವಡಿಸಿದ್ದು ಆಯ್ದ ಶಾಲೆಯ ಬಳಿಗೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದರು. ರೇವಾ ವಿವಿ ಪ್ರಾರಂಭಿಸಿರುವ ‘ಎಜುಕೇಶನ್ ಆನ್ ವೀಲ್ಸ್’ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಪರಿಣಾಮಕಾರಿಯಾಗಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಒಂದು ಬಸ್‌ನಲ್ಲಿ ಕಂಪ್ಯೂಟರ್ ಸಹಿತ ಎಲ್ಲ ಸೌಲಭ್ಯ ಅಳವಡಿಸಲಾಗಿದ್ದು, ಶಾಲೆಗಳಿಗೆ ತೆರಳುವಾಗ ಮಕ್ಕಳಿಗೆ ಮಾಹಿತಿ ನೀಡಲಿದೆ, ಪ್ರೊಜೆಕ್ಟರ್, ಕಂಪ್ಯೂಟರ್, ವೈ-ಫೈ ಸಂಪರ್ಕ, ಸ್ಮಾರ್ಟ್‌ಟಿವಿ ಸೇರಿ 15 ಆಸನಗಳ ವ್ಯವಸ್ಥೆಯಿರುವ ಬಸ್‌ನಲ್ಲಿ ಮೊಬೈಲ್ ಆಪ್ ಮೂಲಕ ಆಧುನಿಕ ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆಬಾಗಿಲಿಗೆ ಕೊಂಡೊಯ್ಯಲಿದೆ ಎಂದರು.

ಬ್ಲಾಕ್ ಕೋಡಿಂಗ್, ಡಿಸೈನಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿರುವ ಉದಯೋನ್ಮುಖ ಮೂಲಭೂತ, ಸುಧಾರಿತ ಕಲಿಕೆಗೆ ವಿದ್ಯಾರ್ಥಿಗಳನ್ನು ಪರಿಚಯಿಸುವ ಗುರಿಯನ್ನು ವಿವಿ ಹೊಂದಿದೆ. ವಿದ್ಯಾರ್ಥಿಗಳಿಗೆ ಸಮಗ್ರ ಕೌಶಲಗಳನ್ನು ಒದಗಿಸುವ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಧ್ಯೇಯ ವಿವಿಗೆ ಇದೆ ಎಂದರು. ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಚಕ್ರಗಳ ಮೇಲೆ ಶಿಕ್ಷಣ’ದ ವಿಶೇಷ : ಬಸ್‌ನಲ್ಲಿ 15 ಆಸನಗಳ ಲ್ಯಾಬ್ ಕೇಂದ್ರವಾಗಿಸಿದ್ದು ವೈ-ಫೈ ಸಂಪರ್ಕ, ಕಂಪ್ಯೂಟರ್ ಮಾನಿಟರ್‌ಗಳು, ಪ್ರೊಜೆಕ್ಟರ್‌ಗಳು ಮತ್ತು ಇತರ ಡಿಜಿಟಲ್ ಶಿಕ್ಷಣ ಉಪಕರಣಗಳಂತಹ ಆಧುನಿಕ ಸೌಲಭ್ಯವಿದ್ದು ಸರ್ಕಾರಿ ಶಾಲೆಯ 1 ಸಾವಿರ ಮಕ್ಕಳಿಗೆ ಇದರ ಪ್ರಯೋಜನವಾಗಲಿದೆ. ಲ್ಯಾಬ್ ವೀಡಿಯೋ ಕಲಿಕೆಗೆ 52 ಇಂಚಿನ ಸ್ಮಾರ್ಟ್‌ಟಿವಿ, 15 ಕಂಪ್ಯೂಟರ್‌ಗಳಿದ್ದು ಸಿಸಿ ಕ್ಯಾಮರಾ ಕೂಡ ಇದೆ. ರೇವಾ ವಿವಿ ಪ್ರಾಧ್ಯಾಪಕರು ಅಭಿವೃದ್ಧಿಪಡಿಸಿರುವ ಪಠ್ಯಕ್ರಮದ ಬೋಧನೆಯಾಗಲಿದೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶವಿದ್ದು ವಿವಿ ದತ್ತು ಪಡೆದಿರುವ ರಾಜ್ಯದ 10 ಸರ್ಕಾರಿ ಶಾಲೆಗಳಲ್ಲಿ ಲ್ಯಾಬ್ ಸ್ಥಾಪಿಸಲಾಗುತ್ತಿದೆ. ಈ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಕಲಿಯಲು ಶುಲ್ಕವಿರುವುದಿಲ್ಲ.

‘ಎಜುಕೇಶನ್ ಆನ್ ವೀಲ್ಸ್’ ರಿಂದ 10ನೇ ತರಗತಿಯಲ್ಲಿ ಕಲಿಯುವವರಿಗೆ ಸಮಾನ ಅವಕಾಶ ಒದಗಿಸುವ ಪ್ರಯತ್ನವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಡಾ.ಎನ್.ರಮೇಶ್, ಕುಲಸಚಿವ, ರೇವಾ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net