ಹಳೇ ನೆನಪು ತೆರೆದಿಟ್ಟ ಸ್ನೇಹ ಸಮ್ಮಿಲನ

29 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ದಿನಗಳೇ ಹಾಗೆ. ಯಾವುದೇ ಜಾತಿ-ಮತ, ಲಿಂಗಭೇದ ಎನ್ನದೆ ಒಟ್ಟೊಟ್ಟಿಗೆ ಆಟ-ಪಾಠ ಮಾಡುವ ದಿನಗಳು. ಅದರಲ್ಲೂ ಪ್ರಾಥಮಿಕ ಶಾಲಾ ದಿನಗಳು ಬಲು ಖುಷಿ ಕೊಡುವ ಸಮಯ. ಹೀಗೆ ಒಟ್ಟೊಟ್ಟಿಗೆ ಕಲಿತ ನಂತರ ಗೆಳಯರು ಬರೋಬ್ಬರಿ 20 ವರ್ಷಗಳ ಬಳಿಕ ಒಂದೆಡೆ ಸೇರುವ ಮೂಲಕ ತಮ್ಮ ಶಾಲಾ ದಿನಗಳಲ್ಲಿ ಮೆಲಕು ಹಾಕಿ ಸಂಭ್ರಮಿಸಿದರು.
ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ 2005-06ನೇ ಇಸ್ವಿಯ ವಿದ್ಯಾರ್ಥಿಗಳು ಎಲ್ಲರೂ ಒಂದೆಡೆ ಸೇರಿದ್ದಲ್ಲದೆ, ಆ ಸಮಯದಲ್ಲಿ ತಮಗೆ ಅಕ್ಷರ ಕಲಿಸಿ ಬದುಕಿನ ಸನ್ಮಾರ್ಗ ತೋರಿದ ಗುರು ವೃಂದಕ್ಕೂ ಗೌರವ ಸಲ್ಲಿಸಿದ ಕ್ಷಣ ಹೃದಯಸ್ಪಶಿರ್ಯಾಗಿತ್ತು.
ಬಹಳ ವರ್ಷಗಳ ಬಳಿಕ ಭೇಟಿಯಾದ ಸ್ನೇಹಿತರೆಲ್ಲರೂ ತಮ್ಮ ಶಾಲಾ ದಿನಗಳಲ್ಲಿ ನಡೆಸಿದ ತುಂಟಾಟಗಳನ್ನು ಸ್ಮರಿಸಿಕೊಂಡು ಸಂತೋಷಪಟ್ಟರು. ತಮಗೆ ಕಲಿಸಿದ ಗುರುಗಳೊಂದಿಗೆ ಸದ್ಯ ತಾವಿರುವ ವೃತ್ತಿ, ಕೌಟುಂಬಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡರು.
ಬಹುತೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕ ಸಂಪರ್ಕ ಕಳೆದುಕೊಳ್ಳುತ್ತಾರೆ. ಆದರೆ ಹಳೇ ವಿದ್ಯಾರ್ಥಿಗಳ ಬಲವು ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಲಿದೆ. ಇದೀಗ 2005-06ನೇ ಬ್ಯಾಚ್​ ವಿದ್ಯಾರ್ಥಿಗಳು ಒಗ್ಗೂಡಿ ಸ್ನೇಹ ಸಮ್ಮಿಲನ ಏರ್ಪಡಿಸಿದ್ದು ಖುಷಿ ಎಂದಿದೆ ಎಂದು ಶಿಕ್ಷಕರು ಅಭಿಪ್ರಾಯ ಹಂಚಿಕೊಂಡರು.
ತಮಗೆ ಕಲಿಸಿದ ಗುರುಗಳಿಗೆ ಹಾಗೂ ಸದ್ಯ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಮಾಡಿದರು. ಬಳಿಕ ಎಲ್ಲರೂ ಸೇರಿ ಸಹ ಭೋಜನ ಮಾಡುವ ಮೂಲಕ ವಿದ್ಯಾರ್ಥಿ ಜೀವನದ ಹಳೇ ನೆನಪುಗಳನ್ನು ಮೆಲಕು ಹಾಕಿ ಸಂತಸ ಪಟ್ಟರು.
ಎಸ್​ಡಿಎಂಸಿ ಅಧ್ಯಕ್ಷ ವಿರುಪಾಕ್ಷಪ್ಪ ಮಲ್ಲೂರ, ಉಪಾಧ್ಯೆ ಶಾಂತ ಕಡ್ಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net