ಪರ್ಸ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ನಿರ್ವಾಹಕ

06 TKE 2,2
ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಖಾಸಗಿ ಬಸ್‌ನಿರ್ವಾಹಕನಿಗೆ ಹೊಸದುರ್ಗದಲ್ಲಿ ನೇರಲಕೆರೆ ಶಾಲೆ ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ಸನ್ಮಾನಿಸಿದರು.
Published on

ತರೀಕೆರೆ: ಹೊಳಲ್ಕೆರೆಯ ಸಾಸಲು ಹಳ್ಳದಿಂದ ಚಿಕ್ಕಜಾಜೂರಿಗೆ ಪ್ರಯಾಣಿಸುವಾಗ ಖಾಸಗಿ ಬಸ್‌ನಲ್ಲಿ ಕಳೆದುಕೊಂಡಿದ್ದ ತಾಲೂಕಿನ ನೇರಲಕೆರೆಯ ಶ್ರೀಅಮೃತೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ಎಂಬುವವರಿಗೆ ಸೇರಿದ ಪರ್ಸ್‌ಅನ್ನು ರಾಮೇಶ್ವರ ಖಾಸಗಿ ಬಸ್‌ನಿರ್ವಾಹಕ ಹನುಮಂತಪ್ಪ ಎಂಬುವವರು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನೇರಲಕೆರೆಯ ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ಶುಕ್ರವಾರ ಸಿರಿಗೆರೆಯಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಬಸ್‌ನಲ್ಲಿ ತೆರಳಿದ್ದರು. ಸಭೆ ಮುಗಿಸಿ ಹಿಂದಿರುಗುವಾಗ ಚಿಕ್ಕಜಾಜೂರಿನಲ್ಲಿ 3,700 ರೂ ನಗದು ಹಣ, ಆಧಾರ್, ಎಲೆಕ್ಷನ್, ಎಟಿಎಂ ಕಾರ್ಡ್ ಒಳಗೊಂಡಿದ್ದ ಪರ್ಸ್ ಕಳೆದುಕೊಂಡಿದ್ದರು. ಊರಿಗೆ ಮರಳಿದ ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್ ಅವರಿಗೆ ಖಾಸಗಿ ಬಸ್ ನಿರ್ವಾಹಕ ಹನುಮಂತಪ್ಪ ಸಂಜೆ ಪೋನ್ ಮೂಲಕ ಸಂಪರ್ಕಿಸಿ ಪರ್ಸ್ ಸಿಕ್ಕಿರುವ ಮಾಹಿತಿ ನೀಡಿದ್ದಾರೆ. ನಂತರ ಹೊಸದುರ್ಗಕ್ಕೆ ಕರೆದು ಹಣ ಇನ್ನಿತರ ದಾಖಲೆಗಳಿದ್ದ ಪರ್ಸ್ ಹಿಂದಿರುಗಿಸಿದರು. ಪರ್ಸ್ ಮರಳಿಸಿದ ಖಾಸಗಿ ಬಸ್ ನಿರ್ವಾಹಕ ಹನುಮಂತಪ್ಪ ಅವರ ಪ್ರಾಮಾಣಿಕತೆ ಮೆಚ್ಚಿದ ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ನಿರ್ವಾಹಕನನ್ನು ಸನ್ಮಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net