

ಶಿವಮೊಗ್ಗ: ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ನನ್ನನ್ನು ಗೆಲ್ಲಿಸಬೇಕು ಎಂದು ಶಿಕ್ಷಕ ಮತದಾರರಿಗೆ ಬಿ.ಆರ್.ನಂಜೇಶ್ (ಬೆಣ್ಣೂರು) ಮನವಿ ಮಾಡಿದರು.
ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಕೈತಪ್ಪಿದೆ. ಕಳೆದೊಂದು ವರ್ಷದಿಂದ ನಾನು 2500ಕ್ಕೂ ಅಧಿಕ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ವಿಶ್ವಾಸ ಗಳಿಸಿದ್ದೇನೆ. ಅವರ ಸಮಸ್ಯೆ ಆಲಿಸಿದ್ದೇನೆ. ನಾನು ಗೆದ್ದರೆ ಆ ಎಲ್ಲ ಸಮಸ್ಯೆ ಬಗೆಹರಿಸುವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಈಗ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಅವರು ಒಪಿಎಸ್ ಜಾರಿಗೆ ತರುವುದಾಗಿ ಹೇಳಿ ಶಿಕ್ಷಕರನ್ನು ಮರಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಇದನ್ನು ಹೇಳಿತ್ತು. ಆದರೆ, ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಒಪಿಎಸ್ (ಹಳೆಯ ಪಿಂಚಣಿ ಪದ್ಧತಿ) ಜಾರಿ ಮಾಡಿದರೆ ಖಂಡಿತಾ ನಾನು ನಾಮಪತ್ರವನ್ನು ಹಿಂಪಡೆಯುತ್ತೇನೆ. ನನಗೆ ಚುನಾವಣೆ ಮುಖ್ಯವಲ್ಲ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ ಎಂದರು. ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂಪಿಎಂ ಷಣ್ಮುಖಯ್ಯ, ಪ್ರಮುಖರಾದ ಮುಖೇಶ್, ಶಕೀಲ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.