ಅಗತ್ಯವಿಲ್ಲದಿದ್ದರೆ ಮಾತ್ರ ಅನುದಾನ ಹಿಂದಿರುಗಿಸಿ

Jamabandi
Published on

ಕುಮಟಾ: ಅಗತ್ಯತೆ ಇಲ್ಲದಿದ್ದಾಗ ಮಾತ್ರ ಇಲಾಖೆಯಲ್ಲಿನ ಹೆಚ್ಚುವರಿ ಅನುದಾನವನ್ನು ಸರ್ಕಾರಕ್ಕೆ ಮರಳಿಸಬೇಕು. ತಾಪಂ ಸಾಮಾನ್ಯ, ಕೆಡಿಪಿ ಸಭೆಗಳನ್ನು ಕಾಲಕಾಲಕ್ಕೆ ನಡೆಸಲೇಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್ ತಿಳಿಸಿದರು.

ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಮಾಬಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯವಾಗಿ ಶಿಕ್ಷಣ ಹಾಗೂ ಸಿಡಿಪಿಒ ಇಲಾಖೆಯಲ್ಲಿ ಹೆಚ್ಚಿನ ಅನುದಾನ ಹಂಚಿಕೆಯಾಗುತ್ತದೆ. ಬಹುತೇಕ ಕೇಂದ್ರ ಸಂಯೋಜಿತ ಅನುದಾನಗಳಾಗಿದ್ದು ತೀರಾ ಅನಗತ್ಯವಾದ ಮೊತ್ತವನ್ನು ಮಾತ್ರ ಸರ್ಕಾರಕ್ಕೆ ಮರಳಿಸಬೇಕು ಎಂದರು.

ಗ್ರಾಮಸಭೆಗಳಲ್ಲಿ ಪ್ರಸ್ತಾವಿತ ಸಂಗತಿಗಳನ್ನು ತಾಪಂ ಸಭೆಗಳಲ್ಲಿ ಸರಿಯಾಗಿ ಪರಿಶೀಲಿಸಿ ಅನುಮೋದಿಸಬೇಕು. ಕೇಂದ್ರ ಸಹಯೋಗದ ಅನುದಾನಗಳನ್ನು ಸಮರ್ಪಕವಾಗಿ ಬಳಸಬೇಕು. ಜಮಾಬಂದಿಯಲ್ಲಿ ಇಲಾಖೆಯ ಸಾಧನೆಯನ್ನು ಸರಿಯಾಗಿ ಬಿಂಬಿಸಬೇಕು ಎಂದರು.

ಉದ್ಯೋಗ ಖಾತ್ರಿ ವಿಭಾಗದ ನಾಗರಾಜ ಶೆಟ್ಟಿ, ಅಕ್ಕಿ ವಿತರಣೆಯಲ್ಲಿ ಹಿಂದಿನ ದರ ವ್ಯತ್ಯಾಸ ಹೊಂದಿಕೆ ವಿಚಾರದಲ್ಲಿ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳು ಆಕ್ಷೇಪ ವ್ಯಕ್ತಪಡಿಸಿವೆ ಎಂದರು.

ಇಒ ನಾಗರತ್ನಾ ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಜೂನ್ ತಿಂಗಳಿಂದ ಗೌರವಧನ ಬಿಡುಗಡೆಯಾಗಿಲ್ಲ. ಬೇರೆ ಖರ್ಚು ವೆಚ್ಚಗಳ ಹಣಕಾಸು ಬಿಡುಗಡೆಗೂ ಅಕೌಂಟ್ ಲಾಕ್ ಆಗಿರುವುದರಿಂದ ಅನುದಾನ ಬಳಸಲು ಸಾಧ್ಯವಾಗಿಲ್ಲ ಎಂದರು.
ತಾಪಂ ಆಡಳಿತಾಧಿಕಾರಿ ಎನ್. ಜಿ. ನಾಯಕ, ವೇತನೇತರ ಅನುದಾನ ಹಂಚಿಕೆ ವಿಚಾರದಲ್ಲಿ ಅನುದಾನ ಬಿಡುಗಡೆಯಾಗದಿರುವ ಸಂದರ್ಭದಲ್ಲಿ ಸುಧಾರಿತ ಫಾರ್ಮ್ಯಾಟ್ ನಂತೆ ಮರಳಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net