

ಶಿವಮೊಗ್ಗ: ಇದುವರೆಗೆ ಭವಿಷ್ಯನಿಧಿ ಸದಸ್ಯರು ಪಿಂಚಣಿ ಪಡೆಯಲು ಕೆಲ ತಿಂಗಳು ಕಾಯಬೇಕಿತ್ತು. ಆದರೆ ಇನ್ನು ಮುಂದೆ ನಿವೃತ್ತಿ ದಿನವೇ ಪಿಂಚಣಿ ಆದೇಶ ಕೈ ಸೇರಲಿದೆ. ಇದಕ್ಕೆ ಕಾರಣವಾಗಿರುವುದು ಕೇಂದ್ರ ಸರ್ಕಾರದ ಪ್ರಯಾಸ್ ಯೋಜನೆ.
ಇನ್ನು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಿಲ್ಲ. ತಿಂಗಳವರೆಗೆ ಕಾಯುವ ಅಗತ್ಯವಿಲ್ಲ. ನಿವೃತ್ತಿಯಾಗುವ ನೌಕರರ ಮಾಸಿಕ ಕಂತನ್ನು ಉದ್ಯೋಗದಾತರು ಒಂದು ತಿಂಗಳು ಮುಂಚಿತವಾಗಿ ಭವಿಷ್ಯನಿಧಿ ಕಚೇರಿಗೆ ಪಾವತಿಸಿದಲ್ಲಿ ನಿವೃತ್ತಿ ದಿನವೇ ಪಿಂಚಣಿ ಆದೇಶ ನೀಡಲಾಗುವುದು ಎಂದು ಭವಿಷ್ಯನಿಧಿ ಶಿವಮೊಗ್ಗ ಪ್ರಾದೇಶಿಕ ಕಚೇರಿ ಸಹಾಯಕ ಆಯುಕ್ತ ಪಿ.ಶ್ರೀನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಧಾರ್ ಲಿಂಕ್ ಕಡ್ಡಾಯ: ಸಿಬ್ಬಂದಿ ಭವಿಷ್ಯನಿಧಿಗೆ ಬ್ಯಾಂಕ್ ಖಾತೆ, ಕೆವೈಸಿ ಹಾಗೂ ಆಧಾರ್ ಸಂಖ್ಯೆಯನ್ನು ಸರಿಯಾಗಿ ಜೋಡಣೆ ಮಾಡಬೇಕು. ಇದುವರೆಗೂ ಸತತ ಪ್ರಯತ್ನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.75 ಸದಸ್ಯರು ಸಮರ್ಪಕವಾಗಿ ಜೋಡಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಹಾಗೂ ಆಧಾರ್ ಮಾಹಿತಿಯನ್ನು ಭವಿಷ್ಯನಿಧಿ ಯುನಿವರ್ಸಲ್ ಅಕೌಂಟ್ ನಂಬರ್ಗೆ ಲಿಂಕ್ ಮಾಡಿದರೆ ಭವಿಷ್ಯನಿಧಿ ಸದಸ್ಯರ ಮೊಬೈಲ್ಗೆ ಅಗತ್ಯ ಸಂದರ್ಭದಲ್ಲಿ ಸಂದೇಶ ಕಳಿಸಲಾಗುತ್ತದೆ ಎಂದು ಪಿ.ಶ್ರೀನಾಥ್ ತಿಳಿಸಿದರು.
ಭವಿಷ್ಯನಿಧಿ ಪಿಂಚಣಿದಾರರು ಪ್ರತಿ ವರ್ಷ ಜೀವಂತ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಇದುವರೆಗೆ ನಮ್ಮ ಕಚೇರಿಗೆ ಇದನ್ನು ನೀಡಬೇಕಿತ್ತು. ಈಗ ಸಾಮಾನ್ಯ ಸೇವಾ ಕೇಂದ್ರ, ಅಂಚೆ ಕಚೇರಿ, ಬ್ಯಾಂಕ್ ಮೂಲಕವೂ ಸಲ್ಲಿಸಬಹುದು. ಉಮಂಗ್ ಆಪ್ ಮೂಲಕವೂ ಭವಿಷ್ಯನಿಧಿ ಕಚೇರಿಯ ಅನೇಕ ಸೇವೆಗಳನ್ನು ಪಡೆಯಬಹುದು. ಡಿಜಿಟಲ್ನ ಸದ್ಬಳಕೆಗೆ ಇದು ನಿದರ್ಶನ ಎಂದರು.
ಪ್ರಯಾಸ್ ಯೋಜನೆಯಡಿ ದಾವಣಗೆರೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಶಿವಶಂಕರ್ ಹಾಗೂ ಶಿವಮೊಗ್ಗದ ಖಾಸಗಿ ಶಾಲಾ ಶಿಕ್ಷಕಿ ವಸಂತಾ ಎಂಬುವವರಿಗೆ ಪಿಂಚಣಿ ಆದೇಶ ಪತ್ರವನ್ನು ಪಿ.ಶ್ರೀನಾಥ್ ಹಸ್ತಾಂತರಿಸಿದರು.