

ಸಂಡೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 2011-12ರಿಂದ ನಿವೃತ್ತಿ ಉಪಧನ ಜಾರಿಗೊಳಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಸುಧಾ ಅರಮನೆಗೆ ಶನಿವಾರ ಮನವಿ ಸಲ್ಲಿಸಿತು.
ಇದನ್ನೂ ಓದಿ: ಅಂಗನವಾಡಿ ಕೇಂದ್ರ ಬಿಲ್ ಎತ್ತುವಳಿ ಆರೋಪ
ತಾಲೂಕು ಅಂಗನವಾಡಿ ನೌಕರರ ಸಂಘದ (ಎಐಟಿಯುಸಿ) ಅಧ್ಯಕ್ಷೆ ಟಿ.ಕವಿತಾ ಮಾತನಾಡಿ, 2022ರ ಏ.25ರಂದು ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ಅಭಯ್ ಎಸ್.ಓಕಾ ನೇತೃತ್ವದ ಪೀಠ, ಅಂಗನವಾಡಿ ನೌಕರರ ಕೆಲಸ ಅರೆಕಾಲಿಕವಲ್ಲ. ನಿಯಮಿತವಾದ ಸಂಬಳ ಹಾಗೂ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ವರು ನಿರ್ವಹಿಸುವ ಕೆಲಸ ಶಾಸನ ಬದ್ಧವಾಗಿದ್ದರೂ ಅದನ್ನು ನಾಗರಿಕ ಸೇವೆ ಅಥವಾ ಹುದ್ದೆಯೆಂದಾಗಲಿ ಪರಿಗಣಿಸಿಲ್ಲ. ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವಧನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಅಂಗನವಾಡಿ ನೌಕರರು ಪಡೆಯುವ ಗೌರವಧನ ವೇತನದ ವ್ಯಾಖ್ಯಾನಕ್ಕೆ ಒಳಪಡುವುದರಿಂದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 1972ರ ಗ್ರಾಚ್ಯುಟಿ ಪಾವತಿ ಕಾಯ್ದೆ ಪ್ರಕಾರ ನೌಕರರಾದ್ದಾರೆ ಎಂದು ತಿಳಿಸಿದೆ ಎಂದರು.
ರಾಜ್ಯ ಸರ್ಕಾರ ಗ್ರಾಚ್ಯುಟಿ ನೀಡಲು ನಿರ್ಧರಿಸಿದ್ದು, ಅದನ್ನು 2023ರಿಂದ ನಿವೃತ್ತರಾದವರಿಗೆ ಮಾತ್ರ ಅನ್ವಯಿಸುತ್ತದೆ ಎನ್ನುವುದು 1972ರ ಗ್ರಾಚ್ಯುಟಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. 1975ರಿಂದ ಸೇವೆಗೆ ಸೇರಿ 2011-12ರಿಂದ ನಿವೃತ್ತರಾದ ಎಲ್ಲರಿಗೂ ಅನ್ವಯವಾಗುವಂತೆ ಗ್ರಾಚ್ಯುಟಿ ನೀಡಬೇಕೆಂದು ಟಿ.ಕವಿತಾ ಒತ್ತಾಯಿಸಿದರು.
ಪ್ರ.ಕಾರ್ಯದರ್ಶಿ ಜಿ.ಈರಮ್ಮ, ಉಪಾಧ್ಯಕ್ಷೆ ಬಿ.ಮಹಾಲಕ್ಷ್ಮೀ, ಖಜಾಂಚಿ ಎಂ.ಅಮೃತಾ, ಪ್ರಮುಖರಾದ ಚೈತ್ರಾ, ಪೂರ್ಣಿಮಾ, ಪಿ.ನೇತ್ರಾವತಿ, ಪಿ.ಸುನಿತಾ, ಕೆ.ಹುಲಿಗಮ್ಮ, ಯಲ್ಲಮ್ಮ, ನಾಗರತ್ನಮ್ಮ, ಕೆ.ಎಸ್.ಮಮತಾ, ಕೆ.ಪಾರ್ವತಮ್ಮ, ಆರ್.ಎಂ.ಜ್ಯೋತಿ, ಕೆ.ದೊಡ್ಡಬಸಮ್ಮ ಇತರರಿದ್ದರು.