

ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 123 ಸೀಟು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ. ಈಗಾಗಲೇ 70ರಿಂದ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಯಾರಾಗಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಇಲ್ಲದಿದ್ದರೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಈಗಾಗಲೇ ರಾಜ್ಯದ ವಿವಿಧೆಡೆ ಜೆಡಿಎಸ್‌ನಿಂದ ಪಂಚರತ್ನ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಜನರು ಶಿವರಾತ್ರಿ ಹಬ್ಬದಂತೆ ಜಾಗರಣೆ ಮಾಡುವ ಮೂಲಕ ಸ್ವಾಗತಿಸುತ್ತಿದ್ದಾರೆ ಎಂದು ಭಾನುವಾರ ವಿಜಯಪುರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿಯಲ್ಲಿ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆಯನ್ನು ಆಯೋಜಿಸಲಾಗಿದೆ. ನಮ್ಮ ಪಕ್ಷದ ಪ್ರಣಾಳಿಕೆಯನ್ನು ಜನರ ಮುಂದೆ ಇಡಲಾಗುತ್ತಿದೆ. 50 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸುವುದು, ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಪಂಗಳಲ್ಲಿ ದೆಹಲಿ ಮಾದರಿಯಲ್ಲಿ ಅಂತಾರಾಷ್ಟ್ರಮಟ್ಟದ ಶಾಲೆ, ಪ್ರತಿ ಗ್ರಾಮ ಪಂಚಾಯಿತಿಗೊಂದು ಆಸ್ಪತ್ರೆ ನಿರ್ಮಿಸಲಾಗುವುದು. ಅದಕ್ಕೆ 25 ಸಾವಿರ ಕೋಟಿ ರೂ. ವೆಚ್ಚ ವಾಗಲಿದೆ. ಜತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಶಕ್ತಿ ಸಂಘಗಳಲ್ಲಿನ ಸಾಲಮನ್ನಾ ಮಾಡಲಾಗುವುದು. ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನವನ್ನು ಮಾಸಿಕವಾಗಿ 5 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ಕಾಳಜಿ ವಹಿಸಲಾಗಿದೆ. ಅದಕ್ಕಾಗಿ ಸಂಕಲ್ಪ ಮಾಡಿದ್ದು, ಯೋಜನೆಯನ್ನು ಜಾರಿಗೊಳಿಸದಿದ್ದಲ್ಲಿ 2028ರ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ರೈತ ಸಾಲಮುಕ್ತನ್ನಾಗಿಸುವ ಉದ್ದೇಶ
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದು, ಅದರಂತೆ ರೈತರು ಸಾಲಮುಕ್ತರನ್ನಾಗಿಸುವ ಉದ್ದೇಶ ಹೊಂದಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರ ಇರಲ್ಲ. ದರ ಇದ್ದಾಗ ಬೆಲೆ ಇರಲ್ಲ. ಹಾಗಾಗಿ ಸರ್ಕಾರದಿಂದಲೇ ದರ ನಿಗದಿ, ಮಾರುಕಟ್ಟೆ ವ್ಯವಸ್ಥೆ, ಖರೀದಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪ್ರತಿ ಗ್ರಾಪಂಗಳಿಗೊಂದರಂತೆ ಕೋಲ್ಡ್ ಸ್ಟೋರೇಜ್, ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ತೆರಿಗೆ ಸಂಗ್ರಹದಲ್ಲಿ ಸೋರಿಕೆ
ಪ್ರತಿ ವರ್ಷವೂ ರಾಜ್ಯ ಸರ್ಕಾರಕ್ಕೆ 6 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಬೇಕು. ಆದರೆ 3 ಲಕ್ಷ ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಇನ್ನುಳಿದ ಹಣ ಸೋರಿಕೆ ಆಗುತ್ತಿದೆ. ಜಿಎಸ್‌ಟಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅಬಕಾರಿ ಸುಂಕ, ಕಂದಾಯ ಇಲಾಖೆಯಿಂದ ಬರುವ ಆದಾಯದ ನಿರ್ವಹಣೆ ಸರಿಯಾಗಿ ಮಾಡಿದಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣದ ಕೊರತೆ ಆಗುವುದಿಲ್ಲ. ಹಾಲು ಮಾರುವವನು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದಾನೆ. ಹೆಂಡ ಮಾರುವವನು ಅಂಗಡಿಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದಾನೆ. ಇದು ನಮ್ಮ ದೇಶದ ಸ್ಥಿತಿ ಎಂದು ವ್ಯಂಗ್ಯವಾಡಿದರು.
ಮನ್ ಕೀ ಬಾತ್ ಕುರಿತು ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಬಗ್ಗೆ ವ್ಯಂಗ್ಯವಾಡಿದ ಸಿ.ಎಂ.ಇಬ್ರಾಹಿಂ, ಜನರ ಮನಸಿನ ಮಾತುಗಳನ್ನು ಜನರಿಗೆ ತಿಳಿಸಬೇಕೇ ಹೊರತು ಅವರ ಮನಸಿನ ಮಾತುಗಳನ್ನಲ್ಲ ಎಂದರು. ‘ಹಮ್ ದೋ ಹಮಾರೇ ದೋ’ ಎಂದು ಮೋದಿ ಅವರು ಹೇಳುತ್ತಾರೆ. ಹಮ್ ದೋ ಅಂದರೆ ಮೋದಿ, ಅಮಿತ್ ಷಾ ಹಾಗೂ ಹಮಾರೇ ದೋ ಎಂದರೆ ಅಂಬಾನಿ, ಅದಾನಿ ಎಂದು ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಚ್ಚುವ ಸ್ಥಿತಿಯಲ್ಲಿದೆ. ತೈಲ ದರ ಹೆಚ್ಚಾಗುತ್ತಿದೆ. ರಸಗೊಬ್ಬರದ ಬೆಲೆ ಏರಿಕೆ ಆಗುತ್ತಿದೆ. ಗ್ಯಾಸ್ ಬೆಲೆ ಗಗನಕ್ಕೇರಿದೆ. ಅದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಬಗ್ಗೆ ಮನ್ ಕೀ ಬಾತ್ ನಲ್ಲಿ ಏಕೆ ಮಾತಾಡುವುದಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆರೋಪಕ್ಕೆ ತಿರುಗೇಟು
ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಮಾಡಿ, ನಂತರ ಅವರನ್ನು ಕೆಳಗಿಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದವರು ಯಾವ ಟೀಂ ನವರು ಎಂದು ಪ್ರಶ್ನಿಸಿದರು. ಇನ್ನೂ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸ್ಕಾರಯುತವರೊಂದಿಗೆ ಮದುವೆ ಆಗುವುದಾಗಿ ತಿಳಿಸಿದರು.
ಬಸವತತ್ವವಾಗಿ ಬದಲಾವಣೆ ಸನ್ನಿಹಿತ
ಹಿಂದುತ್ವ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಪ್ರಚಾರ ಮಾಡುತ್ತಿರುವವರು ಬಸವತತ್ವಕ್ಕೆ ಬದಲಾವಣೆಗೊಳ್ಳುವ ಕಾಲ ಸನ್ನಿಹಿತ ಇದೆ. ಹಿಂದುತ್ವದ ಹಿಂದೆ ಹೋಗುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಸವತತ್ವದ ಹಿಂದೆ ಹೋದರೆ ಮುಖ್ಯಮಂತ್ರಿ ಆಗುತ್ತಾರೆ. ಇನ್ನು ದೇಶದ ಇತಿಹಾಸವನ್ನು ತಿದ್ದುವ, ಬದಲಿಸುವ ಪ್ರಯತ್ನ ಪಡುತ್ತಿರುವ ಮೋದಿ ಹಾಗೂ ಅಮಿತ್ ಷಾ ಅವರು ತಮ್ಮ ಇತಿಹಾಸವನ್ನು ಮೊದಲು ಜನರ ಮುಂದೆ ಇಡಲಿ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಎಸ್.ಮಾಡಗಿ, ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಸ್ನೇಹಲತಾಶೆಟ್ಟಿ, ಅರವಿಂದ ಹಂಗರಗಿ ಮತ್ತಿತರರಿದ್ದರು.