ಚುನಾವಣಾ ರಾಜಕೀಯದಿಂದ ನಿವೃತ್ತಿ

ಚುನಾವಣಾ ರಾಜಕೀಯದಿಂದ ನಿವೃತ್ತಿ
Published on

ಹುಣಸೂರು: ಮುಂಬರುವ ದಿನಗಳಲ್ಲಿ ಚುನಾವಣಾ ರಾಜಕೀಯದಿಂದ ದೂರ ಉಳಿಯಬೇಕೆಂದು ನಿರ್ಧರಿಸಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹುಟ್ಟೂರು ತಾಲೂಕಿನ ಕಲ್ಲಹಳ್ಳಿಯಲ್ಲಿರುವ ಅರಸು ಸಮಾಧಿಗೆ ಸೋಮವಾರ ಗೌರವ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

45 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದೇನೆ. ಈ ಹಿಂದಿನ ಶಕ್ತಿ ಈಗ ಇಲ್ಲ. ವಯೋಸಹಜ ಹಲವು ಸಮಸ್ಯೆಗಳು ನಮಗೆ ಅರಿವಾಗುತ್ತಿದೆ. ಯುವಕರು, ಹೊಸಮುಖಗಳು ರಾಜಕಾರಣಕ್ಕೆ ಬರಬೇಕಿದ್ದು, ಅವರಿಗೆ ನಾವು ಅವಕಾಶ ಮಾಡಿಕೊಡಬೇಕಿದೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮತ್ತು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದರು.

ರಾಜ್ಯಪಾಲರ ನಿಯಮಬಾಹಿರ ನಡೆ: ಸಹಕಾರ ಕ್ಷೇತ್ರ ಜನರ ಆಂದೋಲನವಾಗಬೇಕೆಂಬ ಉದ್ದೇಶದಿಂದ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಕಾಯ್ದೆ 1959ಕ್ಕೆ ಹಲವು ತಿದ್ದುಪಡಿಗಳನ್ನು ಮಾಡಿ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ಹಲವಾರು ವಿಷಯಗಳ ಕುರಿತು ಸ್ಪಷ್ಟೀಕರಣ ಕೋರಿ ರಾಜ್ಯಪಾಲರು 2-3 ಬಾರಿ ವಾಪಸ್ ಕಳುಹಿಸಿದ್ದರು. ಅದಕ್ಕೆ ಸಮಜಾಯಿಷಿ ನೀಡಿ ಮರು ಪರಿಶೀಲನೆಗೆ ಕಳುಹಿಸಲಾಗಿತ್ತು. ಇದೀಗ 2-3 ದಿನಗಳ ಹಿಂದೆ ಬಿಲ್ಲಸನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಸೂಚಿಸಿದ್ದಾರೆ. ಇದು ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರಕ್ಕೆ ಸಂಬಂಧಪಟ್ಟ ತಿದ್ದುಪಡಿ ಬಿಲ್ ಆಗಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಅಗತ್ಯವೇನಿರಲಿಲ್ಲ. ರಾಜ್ಯಪಾಲರ ಈ ನಡೆ ನಿಯಮಬಾಹಿರವಾಗಿದೆ ಎಂದು ರಾಜಣ್ಣ ಬೇಸರಿಸಿದರು.

ನಾಮನಿರ್ದೇಶನ ಸದಸ್ಯರಿಗೆ ಮತಾಧಿಕಾರ: ತಿದ್ದುಪಡಿ ಬಿಲ್‌ನಲ್ಲಿ ಸರ್ಕಾರದಿಂದ ಅನುಕೂಲಗಳನ್ನು ಪಡೆಯುತ್ತಿರುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಎಸ್‌ಸಿ, ಎಸ್ಟಿ ಸಮುದಾಯದವರನ್ನು ಗುರುತಿಸಿ ನಾಮನಿರ್ದೇಶಕರನ್ನಾಗಿಸಿ ಅವರಿಗೆ ಮತ ನೀಡುವ ಅಧಿಕಾರವನ್ನು ನೀಡಲಾಗಿದೆ. ಈ ಕುರಿತು ರಾಜ್ಯಪಾಲರು ಆಕ್ಷೇಪಿಸಿ ಇದು ಆಡಳಿತ ಮಂಡಳಿಯ ಸೂತ್ರಗಳನ್ನು ಬದಲಾಯಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರನ್ನು ಸುಮ್ಮನೆ ಕುಳಿತುಕೊಳ್ಳಲು ಕಳುಹಿಸಬೇಕೇ? ಎಲ್ಲರನ್ನು ಒಳಗೊಂಡು ಸಹಕಾರ ಕ್ಷೇತ್ರ ಮುನ್ನಡೆಯಬೇಕಿದೆ. ಸಹಕಾರ ಕ್ಷೇತ್ರ ಕೆಲವೇ ಗುಂಪುಗಳ ಆಂದೋಲನವಾಗಬಾರದೆನ್ನುವುದೇ ಸರ್ಕಾರದ ನಿಲುವಾಗಿದೆ ಎಂದರು.

ಮೈಸೂರು ಮತ್ತು ಕೋಲಾರ ಡಿಸಿಸಿ ಬ್ಯಾಂಕ್‌ಗಳು ಸೇರಿದಂತೆ ರಾಜ್ಯದ ಹಲವು ಡಿಸಿಸಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಚುನಾವಣೆ 38ಡಿ ಅಡಿ ಮತದಾರರ ಪಟ್ಟಿ ಸೇರಿದಂತೆ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಲು ಕ್ರಮವಹಿಸಲಾಗಿದ್ದು, ಜನಪರ ಆಂದೋಲವಾಗಲಿ, ಎಲ್ಲರಿಗೂ ನ್ಯಾಯ ಸಿಗಬೇಕು, ಸಂಸ್ಥೆಯೂ ಆರೋಗ್ಯಪೂರ್ಣವಾಗಿ ನಡೆಯಬೇಕೆನ್ನುವ ಉದ್ದೇಶದಿಂದ ಚುನಾವಣೆ ಮುಂದೂಡಲಾಗಿದೆಯೇ ಹೊರತು ನಾವೇ ಅಧ್ಯಕ್ಷರಾಗಿ ಕೂರಬೇಕೆಂದೇನಿಲ್ಲವೆಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳ ವರ್ತನೆ ಖಂಡನೀಯ: ಹುಣಸೂರು ತಾಲೂಕಿನ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾ ದಿನಾಂಕ ಘೋಷಿಸಿದ ಚುನಾವಣಾಧಿಕಾರಿಯೇ ಚುನಾವಣೆ ದಿನಾಂಕದಂದು ಗೈರಾಗಿದ್ದಾರೆ. ಈ ಕುರಿತು ಮಾಹಿತಿ ಬಂದಿದೆ. ಇಂತಹ ನಡೆಯನ್ನು ಸಹಿಸುವುದಿಲ್ಲ. ತಾವು ಸಹಕಾರ ಸಚಿವರಾದ ಮೇಲೆ ರಾಜ್ಯಾದ್ಯಂತ ಕರ್ತವ್ಯಲೋಪದ ಆರೋಪ ಹೊತ್ತಿದ್ದ 20ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ತನಿಖೆ ನಡೆಸಿದ್ದೇವೆ. ಶಿಕ್ಷೆಯೂ ಆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂತಹ ಕೆಲವೊಂದು ಬ್ಲಾಕ್‌ಶೀಪ್‌ಗಳಿರುವುದು ಸಹಜ. ಆದರೆ ಅದೆಲ್ಲವನ್ನು ಸರಿಪಡಿಸಿ ಮುಂದುವರಿಯುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್, ತಾಲೂಕು ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು ಇತರರು ಹಾಜರಿದ್ದರು. ನಗರದ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಚಿವರು ಕಲ್ಲಹಳ್ಳಿಗೆ ತೆರಳಿ ಅರಸು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net