ಬೆಂಗಳೂರು: ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಿವೃತ್ತ ಪಿಎಸ್‌ಐನನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ ಅಬ್ದುಲ್ ಹಫೀಜ್(೭೪) ಬಂಧಿತ. ಆರೋಪಿ ಆ.೧೩ರಂದು ಏಳು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಶಿವಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಹೊಂದಿದ್ದು, ಈ ಪೈಕಿ ಒಂದು ಮಹಡಿಯಲ್ಲಿ ಬಾಲಕಿ ಪಾಲಕರ ಜತೆ ವಾಸವಾಗಿದ್ದಳು. ಆ.೧೩ರಂದು ರಾತ್ರಿ ೮.೩೦ರ ಸುಮಾರಿಗೆ ಸಂತ್ರಸ್ತೆ ಕಲರ್ ಜೆರಾಕ್ಸ್ ನೋಟುಗಳನ್ನು ಇಟ್ಟುಕೊಂಡು ಆಟವಾಡುತಿದ್ದಳು. ಆಗ ಕೆಲ ನೋಟುಗಳು ಕೆಳಗೆ ಬಿದ್ದಿವೆ. ಹೀಗಾಗಿ ನೋಟುಗಳನ್ನು ಎತ್ತಿಕೊಂಡು ಹೋಗಲು ಕೆಳಗೆ ಬಂದ ಬಾಲಕಿಯನ್ನು ಆರೋಪಿ ಪುಸಲಾಯಿಸಿ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಬಾಲಕಿಗೆ ಯಾರಿಗೂ ಹೇಳದಂತೆ ಹೆದರಿಸಿ ಕಳುಹಿಸಿದ್ದ. ಆದರೆ, ಬಾಲಕಿಗೆ ನೋವು ಹೆಚ್ಚಾಗಿ ಅಳುತ್ತಿದ್ದರಿಂದ ಪಾಲಕರು ಪ್ರಶ್ನಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಸಂಬಂಧ ಅದೇ ದಿನ ತಡ ರಾತ್ರಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಾಜಿನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.