

ಉಡುಪಿ: ನಿಟ್ಟೂರು ಪ್ರೌಢಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ, 5 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶನಿವಾರ ಸೇವಾ ನಿವೃತ್ತಿ ಹೊಂದಿದ ಮುರಳಿ ಕಡೆಕಾರ್ ಅವರು ತೀರಾ ಬಡಕುಟುಂಬದ ಕಕ್ಕುಂಜೆ ವಾರ್ಡ್ ನಿವಾಸಿ, ಶಾಲಾ ವಿದ್ಯಾರ್ಥಿನಿ ನಯನಾ ಅವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಿದ್ದಾರೆ. ಈ ಮಾದರಿ ಕಾರ್ಯಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ಮಾಡಿ ಶ್ಲಾಘಿಸಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ‘ಮುರಳಿ ಕಡೇಕಾರ್ ಅವರೊಂದಿಗೆ ಮಾತನಾಡಿ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ. ಅತ್ಯಂತ ನಿರ್ಲಿಪ್ತ ಭಾವನೆಯಿಂದ ಅವರು ನನ್ನ ಧನ್ಯವಾದಗಳನ್ನು ಸ್ವೀಕರಿಸಿದ್ದು ಒಂದು ವಿಶೇಷವೇ!’ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುರಳಿ ಶಿಕ್ಷಕರಾಗಿದ್ದ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ನಯನಾ ಕುಟುಂಬದ ಪರಿಸ್ಥಿತಿ ಗಮನಿಸಿ ಉತ್ತಮ ಮನೆ ನಿರ್ಮಿಸಿಕೊಟ್ಟು ಕೃತಾರ್ಥರಾಗಿದ್ದಾರೆ. ನಯನಾಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಇಂತಹ ಶಿಕ್ಷಕರೇ ಸಮಾಜದ ನಿಜವಾದ ಶಕ್ತಿ. ಮುರಳಿ ಕಡೆಕಾರ್ ಅವರ ಈ ಪ್ರವೃತ್ತಿ ಮುಂದುವರಿಯಲು ಅವರಿಗೆ ಅಗತ್ಯ ಚೈತನ್ಯ ಭಗವಂತ ನೀಡಲಿ ಎಂದು ಸುರೇಶ್ ಕುಮಾರ್ ಹಾರೈಸಿದ್ದಾರೆ.
ಶನಿವಾರ ಬೆಳಗ್ಗೆ ಮುರಳಿ ಕಡೆಕಾರ್ ನಿರ್ಮಿಸಿಕೊಟ್ಟ ಮನೆಯನ್ನು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಬಡಕುಟುಂಬಕ್ಕೆ ಹಸ್ತಾಂತರಿಸಿದ್ದರು. ನಂತರ ಶಾಲೆಯಲ್ಲಿ ಕಡೆಕಾರ್ ಅವರ ಅಭಿನಂದನಾ ಕಾರ್ಯಕ್ರಮ ನಡೆದಿತ್ತು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಔದಾರ್ಯ ದೊಡ್ಡದು. ಉಳಿದವರಿಗೆ ಪ್ರೋತ್ಸಾಹ ಸಿಗಲಿ ಎಂಬ ದೃಷ್ಟಿಯಿಂದ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಮನೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2 ಲಕ್ಷ ರೂ. ಲಭಿಸುತ್ತದೆ. ಉಳಿದ ಮೊತ್ತವನ್ನು ನಾನು ಭರಿಸಿದ್ದೇನೆ.
-ಮುರಳಿ ಕಡೆಕಾರ್, ನಿವೃತ್ತ ಶಿಕ್ಷಕ