ಉತ್ತಮ ಚಾರಿತ್ರ್ಯದಿಂದ ಸಿಗಲಿದೆ ಉನ್ನತ ಸ್ಥಾನಮಾನ

10-7hbd1
ಹುಮನಾಬಾದ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸೇವಾ ನಿವೃತ್ತ ಪಂಡಿತ ಬಾಳೂರೆ ದಂಪತಿಯನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರಾದ ಬಸವಕುಮಾರ ಪಾಟೀಲ್, ಮಲ್ಲಿಕಾರ್ಜುನ ಮಠ, ಗಿರೀಶ ಕಡ್ಲೇವಾಡ ಇತರರಿದ್ದರು.
Published on

ಹುಮನಾಬಾದ್: ಉತ್ತಮ ಚಾರಿತ್ರ್ಯ ಮತ್ತು ಕೃತಿಗಳೇ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಬೀದರ್‌ನ ಚಿದಂಬರಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಮಾಣಿಕ್ಯ ಸೌಧದಲ್ಲಿ ಭಾನುವಾರ ಗೆಳೆಯರ ಹಾಗೂ ವಿದ್ಯಾರ್ಥಿ ಬಳಗ ಏರ್ಪಡಿಸಿದ್ದ ರಾಷ್ಟ್ರಪಶಸ್ತಿ ಪುರಸ್ಕೃತ ಶಿಕ್ಷಕ, ಸೇವಾ ನಿವೃತ್ತ ಪಂಡಿತ ಬಾಳೂರೆ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಗುರು-ಹಿರಿಯರನ್ನು ಪರಿಗಣನೆಗೆ ತೆಗೆದುಕೊಳ್ಳದ ಇಂದಿನ ಸ್ಥಿತಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸಿದ ಪಂಡಿತ ಬಾಳೂರೆ ತಮ್ಮ ಸೇವಾ ನಿವೃತ್ತಿ ಸಮಾರಂಭದಲ್ಲಿ ತಾಯಿ ತುಲಾಭಾರ ನೆರವೇರಿಸಿರುವುದು ಮಾದರಿಯಾಗಿದೆ ಎಂದು ಕೊಂಡಾಡಿದರು.

ಮೈಸೂರಿನ ಆಧ್ಯಾತ್ಮ ಚಿಂತಕ ಶಂಕರ ದೇವನೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ೩೭ ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಬಾಳೂರೆ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನ ಬೆಳಗಿಸಿದ್ದು, ಇಂದು ಆ ಜ್ಯೋತಿಗಳು ಸಮಾಜಕ್ಕೆ ದಿವ್ಯ ಜ್ಯೋತಿಯಾಗಿ ಬೆಳಗುತ್ತಿವೆ ಎಂದರು.

ವಿಶ್ರಾಂತ ಅಪರ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಮಾತನಾಡಿ, ಬಾಳೂರೆ ಜೀವನ ಸಾಧನೆ ಕುರಿತ ಕಲ್ಯಾಣ ಸಿರಿ ಅಭಿನಂದನಾ ಗ್ರಂಥ ಬಿಡುಗಡೆ ಭಾಗ್ಯ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವಪ್ಪ ಉಪ್ಪಿನ್ ಗ್ರಂಥಾವಲೋಕನ ಮಾಡಿದರು.

ಪ್ರಮುಖರಾದ ಗಿರೀಶ ಕಡ್ಲೇವಾಡ, ಡಾ.ಪ್ರಕಾಶ ಪಾಟೀಲ್, ನಾಗೇಂದ್ರ ಬಾಳೂರೆ, ಭೀಮರಾವ ಪಾಟೀಲ್ ಬಿಜಲಗಾಂವ, ಮಹಾದೇವಿ ಬಾಳೂರೆ, ಪಾರ್ವತಿ ಬಾಳೂರೆ, ವೆಂಕಟರೆಡ್ಡಿ ಕೊಪಗೀರ, ಭಾವುರಾವ ಪಾಟೀಲ್, ನಾರಾಯಣ ಗಣೇಶ, ಕಿಶನ್ ನಾಯಕ, ಕಾಂತವೀರ ಬಾಳೂರೆ, ಶಂಕರ ಬಾಳೂರೆ, ಮನೋಹರರಾವ ದಾಡಗೆ, ರವೀಂದ್ರರೆಡ್ಡಿ, ಬನ್ಸಿಧರ ಪಾಟೀಲ್ ಇತರರಿದ್ದರು.

ಶರದ ನಾರಾಯಣಪೇಟಕರ್ ಸ್ವಾಗತಿಸಿದರು. ಕರುಣ ಸಲಗರ ವಂದಿಸಿದರು. ಪಂಡಿತ ಬಾಳೂರೆ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ ನೀಡಲಾಯಿತು.

ಕ್ಷೇತ್ರದ ಘಾಟಬೋರಾಳ ಗ್ರಾಮದ ಪ್ರಕಾಶ ವಿದ್ಯಾಲಯದಲ್ಲಿ ಪಂಡಿತ ಬಾಳೂರೆ ಸುದೀರ್ಘ ೩೭ ವರ್ಷ ವಿಜ್ಞಾನ ಶಿಕ್ಷಕ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ್ದಲ್ಲದೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ವಿಶ್ರಾಂತ ಜೀವನ ಸಾಮಾಜಿಕ ಸೇವೆಗೆ ಬಳಕೆಯಾಗಲಿ.
| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net