ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಪ್ರೊ.ಮಹೇಶ್‌ ಚಂದ್ರ ಗುರು ನಿಧನ

mysore
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಮಹೇಶ್‌ಚಂದ್ರ ಗುರು (68) ಹೃದಯಾಘಾತದಿಂದ ಶನಿವಾರ ಸಂಜೆ ನಿಧನರಾದರು.


ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾಂಗ್ರೀನ್ ಕಾರಣದಿಂದ ಕಾಲುನೋವಿನ ಸಮಸ್ಯೆ ಎದುರಿಸುತ್ತಿದ್ದ ಅವರಿಗೆ ಸಂಜೆ 7.30ರ ಸುಮಾರಿಗೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.


ಇವರಿಗೆ ಪತ್ನಿ ಇದ್ದಾರೆ. ವಿಜಯನಗರ 2ನೇ ಹಂತದಲ್ಲಿರುವ 8ನೇ ಕ್ರಾಸ್‌ನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇವರು ಗುಂಡ್ಲುಪೇಟೆಯವರು.

ಹೈದರಾಬಾದಿನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿ, ಚಂಡೀಘಡದ ಭಾರತೀಯ ಮಾಪನ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಸಹಾಯ ನಿರ್ದೇಶಕ, ಬೆಂಗಳೂರು ವಿವಿ ಸಂವಹನ ವಿಭಾಗದಲ್ಲಿ ಉಪನ್ಯಾಸಕ, ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕ, ಮೈವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.


ಮೈಸೂರು ವಿಶ್ವವಿದ್ಯಾಲಯದಿಂದ 1980ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ 1999ರಲ್ಲಿ ಅಭಿವೃದ್ಧಿ ಸಂವಹನ ವಿಷಯದಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದರು. 1980ರಿಂದ ಈವರೆವಿಗೂ ಬಂಡಾಯ ಪತ್ರಿಕೆ ಪಂಚಮದಲ್ಲಿ ವರದಿಗಾರ ಮತ್ತು ಉಪಸಂಪಾದಕರಾಗಿದ್ದರು.


ಇವರು ದಲಿತ ಚಳವಳಿ, ರೈತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಮೊದಲಾದ ಪ್ರಗತಿಪರ ಚಳವಳಿಗಳಲ್ಲೂ ಸಕ್ರಿಯವಾಗಿ ದುಡಿದಿದ್ದಾರೆ. ಇವರು ಸುಮಾರು 32 ಗ್ರಂಥಗಳನ್ನು ಕನ್ನಡ, ಆಂಗ್ಲಭಾಷೆಗಳಲ್ಲಿ ರಚಿಸಿ ಸಮೂಹ ಸಂವಹನ, ಪತ್ರಿಕೋದ್ಯಮ, ಮಹಿಳಾ ಸಾಹಿತ್ಯ, ಬೌದ್ಧ ಸಾಹಿತ್ಯ, ಅಂಬೇಡ್ಕರ್ ಸಾಹಿತ್ಯ ಮೊದಲಾದ ಕ್ಷೇತ್ರಗಳಿಗೆ ಮೌಲಿಕ ಕೊಡುಗೆ ನೀಡಿದ್ದರು.


ಇವರು ಸುಮಾರು 120 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರ ಸುಮಾರು 200 ಲೇಖನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಮಾರ್ಗದರ್ಶನದಲ್ಲಿ ಸುಮಾರು 32 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net