ನಿವೃತ್ತ ಪ್ರಾಂಶುಪಾಲರ ಸಮಗ್ರ ಕೃಷಿ ಪ್ರೀತಿ

ರೈತ ಬಿಳಿಗೌಡ ಅವರು ತಮ್ಮ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿರುವುದು.
ರೈತ ಬಿಳಿಗೌಡ ಅವರು ತಮ್ಮ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿರುವುದು.
Published on

ಮದ್ದೂರು: ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಪ್ರಾಂಶುಪಾಲರೊಬ್ಬರು ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ 8 ರಿಂದ 10 ಲಕ್ಷ ರೂ. ಆದಾಯ ಹೊಂದುವ ಮೂಲಕ ಗಮನ ಸೆಳೆದಿದ್ದಾರೆ.

ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿಯ ತಿಮ್ಮೇಗೌಡರ ಪುತ್ರ ರೈತ ಬಿಳಿಗೌಡ ಇಳಿ ವಯಸ್ಸಿನಲ್ಲೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರು ಹುಬ್ಬೇರುವಂತೆ ಮಾಡಿದ್ದಾರೆ. ಬಿಳಿಗೌಡರು ಗೌರಿಬಿದನೂರು ತಾಲೂಕಿನ ಚಿಕ್ಕಬಳ್ಳಾಪುರದ ತೊಂಡೆಬಾವಿಯ ಎವಿಎನ್‌ಆರ್ ಕಾಲೇಜಿನಲ್ಲಿ ಸುಮಾರು 26 ವರ್ಷ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ನಂತರ 6 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ನಂತರ ಮನೆಯಲ್ಲಿ ಕುಳಿತು ಕಾಲಹರಣ ಮಾಡಬಾರದೆಂಬ ಉದ್ದೇಶದಿಂದ ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಬಿಳಿಗೌಡ ಅವರಿಗೆ ಸುಮಾರು 5.20 ಎಕರೆ ಜಮೀನಿದ್ದು, 1500 ಅಡಕೆ, 500 ತೆಂಗು, 400 ಮಹಾಘನಿ, 50 ಹೊನ್ನೆ, 100 ಟೀಕ್, 50 ಹೆಬ್ಬೇವು, 1 ಎಕರೆ ಪ್ರದೇಶದಲ್ಲಿ ಬಾಳೆ, ಸೀಬೆ, ಸಪೋಟ, ಹಿರಳೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಬೆಟ್ಟದ ನೆಲ್ಲಿಕಾಯಿ, ನೆಲ್ಲಿಕಾಯಿ ಕ್ಯಾಪ್ಸಿಕಂ, ಇಂಗ್ಲಿಷ್ ಕುಕುಂಬರ್, ಸೇವಂತಿ, ಐಶ್ವರ್ಯ ಹೂ ಬೆಳೆಯತ್ತಿದ್ದಾರೆ. ಮನೆಯ ಬಳಿ ವಿವಿಧ ರೀತಿಯ ಸೊಪ್ಪು, ಹಸಿರು ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ಹುಳು ಘಟಕ ತೆರೆದಿದ್ದು, 1.5 ಟನ್ ಎರೆ ಗೊಬ್ಬರ ಉತ್ಪಾದಿಸುತ್ತಿದ್ದಾರೆ. ಇದರೊಂದಿಗೆ 30 ಕುರಿಗಳು, ನಾಟಿ ಕೋಳಿಗಳು ಸೇರಿದಂತೆ ವಿವಿಧ ರೀತಿಯಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಕೈ ತುಂಬ ಆದಾಯ ನೋಡುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದಲ್ಲೂ ಬೇಸಾಯ ಮಾಡಬೇಕೆಂಬ ಹಂಬಲವಿದ್ದ ಕಾರಣ ಹಾಗೂ ತಂದೆ ತಿಮ್ಮೇಗೌಡರ ಬೇಸಾಯವನ್ನು ಹತ್ತಿರದಿಂದ ನೋಡಿದ್ದ ಕಾರಣ ನಿವೃತ್ತಿ ಬಳಿಕ ನೇರವಾಗಿ ಸ್ವಗ್ರಾಮಕ್ಕೆ ಬಂದು ಬೇಸಾಯ ಮಾಡಲು ಆರಂಭಿಸಿದರು. ಬೆಳೆಗಳನ್ನು ಬೆಳೆಯಲು ಯಾವುದೇ ರಾಸಾಯಾನಿಕ ವಸ್ತುಗಳನ್ನು ಬಳಕೆ ಮಾಡದೆ ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಸಿಗುವ ಸಾವಯವ ಗೊಬ್ಬರ ಹಾಗೂ ರೈತರಿಂದ ಕೊಟ್ಟಿಗೆ ಗೊಬ್ಬರವನ್ನು ಸ್ಥಳೀಯವಾಗಿ ಖರೀದಿ ಮಾಡಿ ಬೇಸಾಯಕ್ಕೆ ಬಳಕೆ ಮಾಡುತ್ತಿರುವ ಇವರು, ಹೆಚ್ಚಿನ ಫಸಲನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ.

ಜಮೀನಿನಲ್ಲಿ 2 ಬೋರ್‌ವೆಲ್ ಕೊರೆಸಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿಗೆ ತೋಟಗಾರಿಕೆ ಇಲಾಖೆಯ ಸಬ್ಸಿಡಿ ಪಡೆದುಕೊಂಡಿದ್ದಾರೆ. ಹನಿ ನೀರಾವರಿ ಬಳಕೆ ಮಾಡಿಕೊಂಡಿರುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆಗಳನ್ನು ಬೆಳೆಯಬಹುದು ಎನ್ನುತ್ತಾರೆ ರೈತ ಬಿಳಿಗೌಡ. ಬೇಸಾಯಕ್ಕೆ ಕೂಲಿ ಕಾರ್ಮಿಕರನ್ನು ನೆಚ್ಚಿಕೊಳ್ಳದೆ ಜಮೀನಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುತ್ತಾರೆ. ಅನಿವಾರ್ಯವಾದರೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸವಿದ್ದಾಗ ಮಾತ್ರ ಕಾರ್ಮಿಕರನ್ನು ಕೆಲಸಕ್ಕೆ ಕರೆಯುತ್ತಾರೆ. ಇವರ ಕೃಷಿ ಕಾಯಕಕ್ಕೆ ಪತ್ನಿ ಮೀನಗೌಡ, ಪುತ್ರಿ ನಿಸರ್ಗಾಗೌಡ ಹಾಗೂ ಪುತ್ರ ಡಾ.ನಿರಂಜನ್‌ಗೌಡ ಸಾಥ್ ನೀಡುತ್ತಿದ್ದಾರೆ.

2022ರಲ್ಲಿ ಪಾಲಿಹೌಸ್‌ನಲ್ಲಿ ಸುಮಾರು 2.20 ಎಕರೆ ಪ್ರದೇಶದಲ್ಲಿ ಇಂಗ್ಲಿಷ್ ಕುಕುಂಬರ್ ಅನ್ನು ಬಿಳಿಗೌಡ ಹಾಗೂ ಪುತ್ರಿ ನಿಸರ್ಗಾ ಬೆಳೆದಿದ್ದರು. ಬಳಿಕ ಅದನ್ನು ತಮ್ಮ ಕಾರಿನಲ್ಲೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದನ್ನು ನೆನೆಯುತ್ತಾರೆ. ಬಿಳಿಗೌಡ ರ ಸಮಗ್ರ ಕೃಷಿಯನ್ನು ಮೆಚ್ಚಿ ಕೃಷಿ ಇಲಾಖೆ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೃಷಿ ಪದ್ಧತಿಯನ್ನು ವೀಕ್ಷಿಸಲೆಂದೆ ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ರೈತರು ಆಗಮಿಸಿ ಮಾಹಿತಿ ಪಡೆದು ಹೋಗುತ್ತಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ, ನರೇಗಾ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳಲ್ಲೂ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡಿ ಅಧಿಕಾರಿಗಳಿಂದ ವೈಜ್ಞಾನಿಕವಾಗಿ ಮಾಹಿತಿ ಪಡೆದು ಕೃಷಿ ಮಾಡಿಕೊಳ್ಳುತ್ತಿರುವುದು ಇವರ ಕೃಷಿ ಯಶಸ್ವಿಗೆ ಮತ್ತೊಂದು ಕಾರಣ ಎನ್ನಲಾಗಿದೆ.

ಬೇಸಾಯ ನಂಬಿ ವೈಜ್ಞಾನಿಕವಾಗಿ ಸಮಗ್ರ ಕೃಷಿ ಮಾಡಿದರೆ ಯಾರಿಗೂ ನಷ್ಟ ಎಂಬುದು ಆಗುವುದಿಲ್ಲ. ಬೇಸಾಯವನ್ನು ಕಷ್ಟಪಟ್ಟು ಹಾಗೂ ಇಷ್ಟ ಪಟ್ಟು ಮಾಡಬೇಕು. ಆಗ ಮಾತ್ರ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ನನ್ನ ಕೃಷಿ ಯಶಸ್ವಿಗೆ ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಹಕಾರ ನೀಡುತ್ತಿರುವುದೇ ಕಾರಣ.

ಬಿಳಿಗೌಡ ಸಮಗ್ರ ಕೃಷಿಕ, ತಗ್ಗಹಳ್ಳಿ

ವೈಜ್ಞಾನಿಕವಾಗಿ ರಸಬಾಳೆ, ಅಡಕೆ, ತೆಂಗು ಹಾಗೂ ತರಕಾರಿ ಬೆಳೆಗಳನ್ನು ಬಿಳಿಗೌಡ ಹನಿ ನೀರಾವರಿ ಪದ್ಧತಿಯಡಿ ಯಶಸ್ವಿಯಾಗಿ ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆ ನೀಡುವ ಸಹಾಯ ಧನವನ್ನು ಬಳಸಿಕೊಂಡು ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿ ಕ್ಯಾಪ್ಸಿಕಂ, ಇಂಗ್ಲಿಷ್ ಕುಕುಂಬರ್ ಬೆಳೆಯುತ್ತಿದ್ದಾರೆ. ಅಲ್ಲದೆ ಹನಿ ನೀರಾವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ಕೆ.ಎಂ.ರೇಖಾ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ, ಮದ್ದೂರು

ಬಿಳಿಗೌಡ ಅವರಿಗೆ ಕೃಷಿ ಇಲಾಖೆಯಿಂದ ಎಲ್ಲ ರೀತಿಯ ಸಲವತ್ತು ಹಾಗೂ ಮಾಹಿತಿ ನೀಡಲಾಗುತ್ತಿದೆ. ಇಳಿ ವಯಸ್ಸಿನಲ್ಲೂ ಕೃಷಿ ಮೇಲಿರುವ ಪ್ರೀತಿಯನ್ನು ನೋಡಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಕೃಷಿಯಲ್ಲಿ ಹೆಚ್ಚು ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು.

ಕೆ.ಎಸ್.ವಿಜಯ್‌ಕುಮಾರ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕ, ಕೃಷಿ ಇಲಾಖೆ, ಮದ್ದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net