

ಮೈಸೂರು: ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಂದಿನ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಟೀಕಿಸುವ ವರು ನಾಳೆ ಅಧಿಕಾರಕ್ಕೆ ಬಂದರೆ 50 ಪರ್ಸೆಂಟ್ ಸರ್ಕಾರವನ್ನು ನಡೆಸುತ್ತಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಶ್ವಾಸ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳು ಭಿನ್ನವಾಗಿಲ್ಲ. ಹೀಗಾಗಿ ಯಾರಿಗೆ ಮತ ಹಾಕಬೇಕು ಎಂಬ ಗೊಂದಲ್ಲಿ ಜನರು ಇದ್ದಾರೆ. ಇಂದಿನ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಟೀಕಿಸುವವರು ತಮ್ಮ ಅಧಿಕಾರಾವಧಿಯಲ್ಲಿ 10 ಪರ್ಸೆಂಟ್ ಕಮಿಷನ್ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಈ ಹಿಂದೆ ಯಾರಾದರು ಜೈಲಿಗೆ ಹೋಗಿ ಬಂದರೆ ಆ ಮನೆಯ ಹತ್ತಿರ ಹೋಗಬೇಡ ಎಂದು ಪಾಲಕರು ನಮಗೆ ಹೇಳುತ್ತಿದ್ದರು. ಆದರೆ, ಇಂದು ಜೈಲಿಗೆ ಹೋಗಿ ಬಂದವರನ್ನು ಸ್ವಾಗತ ಮಾಡಲು ಜನರು ಹೋಗುತ್ತಿದ್ದಾರೆ. ಏನು ಸಂದೇಶವನ್ನು ಇವರು ಸಮಾಜಕ್ಕೆ ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಹೈಕೋರ್ಟ್ ರದ್ದುಪಡಿಸಿ ನೀಡಿರುವ ತೀರ್ಪು ಸ್ವಾಗತಾರ್ಹ. ಇಂದಿನ ಎಸಿಬಿಗಿಂತ ಲೋಕಾಯುಕ್ತ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಬಹಳ ಉತ್ತಮವಾದ ತೀರ್ಪು ಇದು. ದೇಶದ ಆಡಳಿತದಲ್ಲಿ ಭ್ರಷ್ಟಾಚಾರವಿದೆ ಅನ್ನುವ ಕಾರಣಕ್ಕೆ 70ರ ದಶಕದಲ್ಲಿಯೇ ಆಡಳಿತ ಸುಧಾರಣಾ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವರದಿಯೊಂದನ್ನು ಕಳುಹಿಸಿ ಭ್ರಷ್ಟಾಚಾರ ತಡೆಗೆ ಸ್ವತಂತ್ರ ಸಂಸ್ಥೆ ಕಟ್ಟಬೇಕು ಎಂದು ಸಲಹೆ ನೀಡಿತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, 1984ರಲ್ಲಿ ಅಂದಿನ ರಾಜ್ಯ ಸರ್ಕಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಾರಂಭದಲ್ಲಿ ಅಷ್ಟೊಂದು ಕೆಲಸ ಆಗದೆ ಇದ್ದರೂ 2001ರಲ್ಲಿ ನ್ಯಾಯಮೂರ್ತಿ ವೆಂಕಟಾಚಲಯ್ಯ ಬಂದ ನಂತರ ಬಹಳ ಉತ್ತಮವಾದ ಕೆಲಸ ಮಾಡಿದರು. ಹಾಗಾಗಿ ಆ ಸಂಸ್ಥೆ ಅತ್ಯಂತ ಜನಪ್ರಿಯವಾಯಿತು ಎಂದರು.