

ಹರಿಹರ: ಕೆಲವರು ಸಂವಿಧಾನವನ್ನು ಶಕ್ತಿಹೀನಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಸಿದ್ದು, ಸಂವಿಧಾನದ ಉಳಿವಿಗಾಗಿ ನಾವು ಎಲ್ಲರನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದರು.
ತಾಲೂಕಿನ ಬೈಪಾಸ್ ರಸ್ತೆಯ ಮೈತ್ರಿವನದ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ ಗುರುವಾರ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಬದಲಿಸಬೇಕೆನ್ನುವವರು ದೇಶದ ಆಡಳಿತಕ್ಕೆ ಏನು ಮಾಡುತ್ತಾರೆಂದು ಸ್ಪಷ್ಟಪಡಿಸುತ್ತಿಲ್ಲ. ಅದನ್ನು ಬದಲಾಯಿಸುವುದು ಸುಲಭವಲ್ಲವೆಂದು ತಿಳಿದೂ ಅದರ ಶಕ್ತಿಹೀನಗೊಳಿಸುವ ಹುನ್ನಾರ ನಡೆಸುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಸಂವಿಧಾನದಲ್ಲಿ ದೋಷಗಳಿದ್ದರೆ ತಿದ್ದುಪಡಿಗೆ ಅವಕಾಶ ನೀಡಿದೆ. ಈವರೆಗೆ ಹಲವು ಬಾರಿ ತಿದ್ದುಪಡಿಗಳಾಗಿದ್ದು, ಇನ್ನಷ್ಟು ತಿದ್ದುಪಡಿ ಅಗತ್ಯವಿದ್ದರೆ ಅದನ್ನು ಪರಮರ್ಶಿಸಿ ಜಾರಿ ಮಾಡಿ ಸಂವಿಧಾನ ಸೂಕ್ತಗೊಳಿಸಬಹುದಾಗಿದೆ ಎಂದು ಹೇಳಿದರು.
ಭಾರತದ ಕುರಿತು ಪರಿಚಯವಿಲ್ಲದವರು ಸಂವಿಧಾನದ ಆಶಯ ಅರಿಯಲಾರರು. ಭಿನ್ನ ಭೌಗೋಳಿಕತೆ, ಸಂಸ್ಕೃತಿ, ಪರಂಪರೆ, ಆಹಾರ ಶೈಲಿ, ಹಿನ್ನೆಲೆಯ ಜನ ಸಮುದಾಯಗಳ ಮಿಶ್ರಣ ಭಾರತವಾಗಿದೆ. ಈ ಎಲ್ಲ್ಲ ವಿಭಿನ್ನತೆ ಸೂಕ್ಷ್ಮತೆ ಅರಿತು ಡಾ.ಅಂಬೇಡ್ಕರ್ ಮತ್ತು ಸಂಗಡಿಗರು ಈ ಸಂವಿಧಾನ ರಚಿಸಿದ್ದಾರೆಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸಂಘಟಕರನ್ನು ಗೌರವಿಸುತ್ತಾ ಸಂಘಟನೆ ಒಡೆಯುವ ಕೆಲಸ ಮಾಡಲಾಗುತ್ತಿದೆ. ಹಿಂದೆ ಒಂದೆ ಆಗಿದ್ದಾಗ ಕದಸಂಸ ಶಕ್ತಿಶಾಲಿಯಾಗಿತ್ತು, ಒಡಕು ಮೂಡಿದ್ದರಿಂದ ಸಂಘಟನೆ ಶಕ್ತಿ ಕುಂದಿದೆ, ಹಕ್ಕಿಗಾಗಿ ಹೋರಾಟ ಮಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದರು.
ಕದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಬೆಂಗಳೂರಿನ ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಎನ್. ಉಮೇಶ್, ಮೈತ್ರಿವನದ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ, ಕದಸಂಸ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ನಾಗಪ್ಳರ ಮಂಜುನಾಥ ಇತರರಿದ್ದರು.