

ಮೈಸೂರು: ಅಭಿವೃದ್ಧಿ ಹೆಸರಿನಲ್ಲಿ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನ್ನು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನಿವೃತ್ತ ಐಆರ್‌ಎಸ್ ಅಧಿಕಾರಿ ಎಚ್.ಆರ್.ಭೀಮಾಶಂಕರ್ ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯಿಂದ ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ‘ದಲಿತರ ಹಕ್ಕು ಮತ್ತು ಅವಕಾಶಗಳನ್ನು ಕಸಿದುಕೊಳ್ಳುತ್ತಿರುವ ಸರ್ಕಾರಗಳು’ ವಿಷಯ ಕುರಿತು ಮಂಗಳವಾರ ಏರ್ಪಡಿಸಿದ್ದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಸಮುದಾಯವನ್ನು ಸಬಲರನ್ನಾಗಿಸುವ ಉದ್ದೇಶದಿಂದ ಎಸ್‌ಸಿ-ಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಹಣವನ್ನು ದಲಿತ ಸಮುದಾಯಗಳ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಳಸಬೇಕು. ಎಸ್ಸಿ-ಎಸ್ಟಿ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಮೀಸಲಿಡಬೇಕು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ ಎಂದರು.
ಈ ಮೂಲಕ ಮೇಲ್ವರ್ಗದವರು ಮತ್ತು ಎಸ್ಸಿ-ಎಸ್ಟಿ ಸಮುದಾಯಗಳ ನಡುವಿನ ಆರ್ಥಿಕ ಅಂತರವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಆದರೆ ಸರ್ಕಾರಗಳು ಈ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು, ದಲಿತ ಸಮುದಾಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿವೆ. ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ದಲಿತರ ಪಾಲಿನ ಹಣ ದುರ್ಬಳಕೆ ಆಗುತ್ತಿದೆ ಎಂದರು.
ಸಮುದಾಯದ ಬಹುತೇಕ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ವಿವಿಧ ಕಾರಣಗಳಿಂದ ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಒಂದು ಹಳ್ಳಿಯಲ್ಲಿ ಸಮುದಾಯದ ಒಬ್ಬಿಬ್ಬರು ಮಾತ್ರ ಸರ್ಕಾರಿ ನೌಕರಿ ಸೇರುತ್ತಾರೆ. ಶೇ.90 ರಷ್ಟು ಕುಟುಂಬಗಳಿಗೆ ಕೃಷಿ ಭೂಮಿ ಇಲ್ಲ. ಅವರೆಲ್ಲರೂ ಮೆಲ್ವರ್ಗದವರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ, ವಿವಿಧ ಕಡೆಗಳಲ್ಲಿ ದಿನಕೂಲಿ ನೌಕರರಾಗಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ನೀರಾವರಿ, ಕೃಷಿ, ಲೋಕೋಪಯೋಗಿ ಇತ್ಯಾದಿ ಇಲಾಖೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಹಣವನ್ನು ನೀರಾವರಿ ಯೋಜನೆಗೆ, ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ದಲಿತರಿಗೆ ಜಮೀನುಗಳಿಲ್ಲ, ಆದ್ದರಿಂದ ನೀರಾವರಿ ಯೋಜನೆಯಿಂದ ಅವರಿಗೆ ಯಾವುದೇ ಉಪಯೋಗವಿಲ್ಲ ಎಂದರು.
ದಲಿತ ಸಚಿವರಿಂದ ದಲಿತರಿಗೆ ಅನ್ಯಾಯ: ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ ದಲಿತ ಸಮುದಾಯದ ರಾಜಕೀಯ ಮುಖಂಡರೇ ದಲಿತರ ಹಣ ದುರ್ಬಳಕೆ ಆಗುವುದನ್ನು ತಪ್ಪಿಸದೆ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಟೀಕಿಸಿದರು.
ದಲಿತರ ಹಣವನ್ನು ದಲಿತರಿಗಾಗಿಯೇ ಬಳಸಿದರೆ, ಅವರಿಗೆ ವಿವಿಧ ನಿಗಮಗಳಡಿಯಲ್ಲಿ ಸಾಲ ನೀಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಎಸ್‌ಸಿಎಸ್‌ಪಿ ಅನುದಾನದಲ್ಲಿ ಕೃಷಿ ಭೂಮಿ, ಹಾಲಿನ ಡೈರಿ, ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳನ್ನು ತೆರೆಯಬಹುದಿತ್ತು. ಇದರಿಂದ ದಲಿತ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಂತಾಗುತ್ತಿತ್ತು ಎಂದು ತಿಳಿಸಿದರು.
ಸಮಾಜಶಾಸ್ತ್ರಜ್ಞ ಸಿ.ಜಿ.ಲಕ್ಷ್ಮೀಪತಿ, ಪ್ರೊ.ಆರ್.ತಿಮ್ಮರಾಯಪ್ಪ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪ್ರದೀಪ್ ಮುಮ್ಮಡಿ, ಯಡದೊರೆ ಮಹಾದೇವಯ್ಯ ಇತರರು ಇದ್ದರು.