ಊರಿನ ಋಣ ತೀರಿಸಲು ಮುಂದಾದ ನಿವೃತ್ತ ಐಪಿಎಸ್ ಅಧಿಕಾರಿ

6-kollegal-8,,,,
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಸೂಸಯ್ಯ ಮತ್ತು ಲಕ್ಷ್ಮಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊರನೋಟ.
Published on

ಕೊಳ್ಳೇಗಾಲ: ಹುಟ್ಟಿದ ಊರಿನ ಋಣ ತೀರಿಸಲು ಇಲ್ಲೊಬ್ಬ ಸರ್ಕಾರಿ ಅಧಿಕಾರಿಯೊಬ್ಬರು ಶಾಲೆಯನ್ನು ನಿರ್ಮಿಸಿದ್ದಾರೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.7 ರಂದು 11.30 ಗಂಟೆಗೆ ಶಾಲೆಯನ್ನು ಉದ್ಘಟಿಸಲಿದ್ದಾರೆ.

ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ, ಸತ್ತೇಗಾಲ ಗ್ರಾಮದ ಸೂಸಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರ ಮರಿಸ್ವಾಮಿ ಅವರೇ ತನ್ನೂರಿಗೆ ಎಂದೂ ಮರೆಯಲಾಗದ ಕೊಡುಗೆ ನೀಡಿದವರು.

ಐಪಿಎಸ್ ಮರಿಸ್ವಾಮಿ ಎಂದೇ ಖ್ಯಾತಿ ಪಡೆದಿದ್ದ ಇವರು ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂಬ ಖ್ಯಾತಿ ಪಡೆದಿದ್ದರು. ಸೇವೆಯಿಂದ ನಿವೃತ್ತರಾದ ಬಳಿಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಗ್ರಾಮದಲ್ಲಿ ನಾನು ಓದಿದ ಶಾಲೆ ಶಿಥಿಲಾವಸ್ಥೆಗೊಂಡಿದೆ ಎಂದು ತಿಳಿದ ಮರಿಸ್ವಾಮಿ ಅವರು ಸೇರಿದಂತೆ ತನ್ನೊಟ್ಟಿಗಿನ 63 ದಾನಿಗಳ ಜತೆಗೂಡಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಸೂಸಯ್ಯ ಮತ್ತು ಲಕ್ಷ್ಮಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕಟ್ಟಿಸಿದ್ದಾರೆ. ಬಂಡವಾಳಶಾಯಿಗಳ ಶಿಕ್ಷಣ ಸಂಸ್ಥೆಯ ಕಟ್ಟಡಗಳನ್ನೇ ಮೀರಿಸುವ ರೀತಿಯಲ್ಲಿ 12 ಕೊಠಡಿವುಳ್ಳ ಸುಸಜ್ಜಿತ ಶಾಲೆಯನ್ನು ಕಟ್ಟಿಸಿದ್ದಾರೆ. ನೆಲ ಹಂತಸ್ತು ಹಾಗೂ 1ನೇ ಹಂತಸ್ತಿನ ಕಟ್ಟಡ ಇದಾಗಿದೆ. ಶಾಲಾ ಆವರಣದಲ್ಲಿ ವಿಶಾಲವಾದ ಮೈದಾನವಿದೆ. ತರಗತಿ ಕೊಠಡಿ, ಕಂಪ್ಯೂಟರ್ ಕೊಠಡಿ, ಶೌಚಗೃಹ ಒಳಗೊಂಡ ವ್ಯವಸ್ಥಿತವಾದ ಶಾಲೆ ನಿರ್ಮಾಣವಾಗಿದೆ. ಕಳೆದ 3 ವರ್ಷಗಳಿಂದ ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಅವರು ಶ್ರಮ ವಹಿಸಿದ ಫಲವಾಗಿ ಸುಂದರ ಶಾಲೆ ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ಶಾಲಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದಾರೆ. ಡಿ.7 ರಂದು ಬೆಳಗ್ಗೆ 11 ಗಂಟೆಗೆ ನರೀಪುರ ಹೆಲಿಪ್ಯಾಡ್‌ಗೆ ಸಿಎಂ ಆಗಮನವಾಗಲಿದೆ. ನಂತರ, ಸತ್ತೇಗಾಲ ಗ್ರಾಮಕ್ಕೆ ಭೇಟಿ ನೀಡಿ ಸುಮಾರು 11.30 ಗಂಟೆಗೆ ಸೂಸಯ್ಯ ಮತ್ತು ಲಕ್ಷಮ್ಮ ಶಾಲೆಗೆ ಚಾಲನೆ ನೀಡಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಸಚಿವರು ಹಾಗು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಿಎಂ ಅವರೊಂದಿಗೆ ಉಪಸ್ಥಿತಿ ಇರಲಿದ್ದಾರೆ. ಕಾರ್ಯಕ್ರಮದ ಸಕಲ ತಯಾರಿಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net