ಕಾವೇರಿ ನೀರಿನ ಹೋರಾಟಕ್ಕೆ ಕಾನೂನಾತ್ಮಕ ಪರಿಹಾರವೇ ಅಂತಿಮ: ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಸ್ಪಷ್ಟನುಡಿ

Retired IGP C. Chandrasekhar supports Cauvery protest mandya
Published on

ಮಂಡ್ಯ: ದೇಶದಲ್ಲಿ ಒಕ್ಕೂಟ ಸರ್ಕಾರ ಅಸ್ತಿತ್ವದಲ್ಲಿದೆ. ಅಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದತ್ತ ಕಾನೂನು ಜಾರಿಯಲ್ಲಿವೆ. ಹಾಗಾಗಿ ಕಾವೇರಿ ನೀರಿನ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಪಡೆಯುವುದು ಒಳ್ಳೆಯ ಮಾರ್ಗ ಎಂದು ಕಾವೇರಿ ವಿವಾದ ಚಾರಿತ್ರಿಕ ಹಿನ್ನೋಟ ಕೃತಿ ಕರ್ತೃ, ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಹೇಳಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಗೆ ಭಾವುಕತೆ, ಆವೇಶ, ಕೋಪ, ಬೇಸರ ಪರಿಹಾರವಾಗದು. ಬದಲಿಗೆ ಕಾನೂನು ಪರಿಹಾರವೇ ಅಂತಿಮ. ನದಿ ಪ್ರಕೃತಿದತ್ತ ವರ ಎಂದರಿತು ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಿದೆ. ಇದಕ್ಕೆ ಕಾವೇರಿ ಕುಟುಂಬದಂತಹ ಆಲೋಚನೆ ಸೂಕ್ತ ಮಾರ್ಗವಾಗಿದ್ದು, ಆ ಮೂಲಕ ಸಂಕಷ್ಟ ಸೂತ್ರ ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ಧ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ. ಬದಲಾಗಿ ವಸ್ತು ಸ್ಥಿತಿ ಆಧಾರಿತ ಅಂಕಿ ಅಂಶ ಮುಂದಿಟ್ಟು ಪರಿಹಾರ ಪಡೆಯಲು ಮುಂದಾಗಬೇಕು. ಆದ್ದರಿಂದ ಆಳುವ ಸರ್ಕಾರ ಸಂಕಷ್ಟ ಪರಿಸ್ಥಿತಿಯ ಬಗ್ಗೆ ಸಮರ್ಪಕ ಮಾಹಿತಿಯನ್ನು ಪಾರದರ್ಶಕವಾಗಿ ನೀಡಬೇಕು. ಆ ವಿಚಾರ ಜನತೆಗೆ ಗೊತ್ತಿರಬೇಕು ಎಂಬ ನಿಟ್ಟಿನಲ್ಲಿ ಒತ್ತಡ ಇರಲಿ ಎಂದು ಹೇಳಿದರು.

ಕಾವೇರಿ ಮಧ್ಯಂತರ ಆದೇಶದಲ್ಲಿ ದೊಡ್ಡ ಮಟ್ಟದ ಅನ್ಯಾಯ ಆಗಿತ್ತು. ಆನಂತರ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಿತ್ತು. ಮಳೆ ಕೊರತೆ ಇಲ್ಲದಿದ್ದಾಗ ತ.ಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗಿದೆ. ಸಂಕಷ್ಟದ ವರ್ಷದಲ್ಲಿ ನೀರಿನ ಕೊರತೆ ಇರುವುದರಿಂದ ಅಷ್ಟು ಪ್ರಮಾಣದ ನೀರನ್ನು ಹರಿಸಲು ಕರ್ನಾಟಕಕ್ಕೆ ಸಮಸ್ಯೆಯಾಗುತ್ತಿದೆ. ಅಂತಿಮ ತೀರ್ಪಿನಲ್ಲಿರುವ ಸಂಕಷ್ಟ ಸೂತ್ರದಲ್ಲೂ ನೀರಿನ ಕೊರತೆ ಪ್ರಮಾಣಕ್ಕೆ ಅನುಗುಣವಾಗಿ ನೀರು ಹರಿಸಬೇಕು ಎಂದಿದ್ದರೂ ಅದು ತಿಂಗಳಿಗೊ ಅಥವಾ ವರ್ಷಕ್ಕೊ ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net