ನಿವೃತ್ತ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್, 19 ಲಕ್ಷ ರೂ. ವಂಚನೆ

Digital Arrest
Published on

ಶಿವಮೊಗ್ಗ: ನಿವೃತ್ತ ಉದ್ಯೋಗಿಯೊಬ್ಬರಿಗೆ ವಿಡಿಯೋ ಕಾಲ್ ಮೂಲಕ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 19 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗ ಗೋಪಾಳದ ನಿವೃತ್ತ ಉದ್ಯೋಗಿಯನ್ನು ಗುರಿಯಾಗಿಸಿ ಸೆ.17ರಂದು ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿದ್ದ ವಂಚಕ ಮುಂಬೈನ ಕೊಲಾಬ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿಖಾವತ್ ಎಂದು ಆತ ಪರಿಚಿಯಿಸಿಕೊಂಡಿದ್ದ. ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದ್ದು, ಸ್ಕಾೃಮರ್ ಅರುಣ್ ಗೋಯೆಲ್ ಎಂಬುವರಿಗೆ ನೀವು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದೀರಿ. ಹಾಗಾಗಿ ಕೂಡಲೆ ಬಂಧನ ಮಾಡಲಾಗುತ್ತದೆ ಎಂದು ಬೆದರಿಸಿದ್ದ. ನೀವು ಮುಂಬೈಗೆ ಬರಲು ಸಾಧ್ಯವಾಗದಿದ್ದರೆ ವಿಡಿಯೋ ಕಾಲ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿ ಜಾಮೀನು ಕೊಡಿಸುವುದಾಗಿ ನಂಬಿಸಿದ್ದ.

ನಿವೃತ್ತ ಉದ್ಯೋಗಿ ಆತನ ಮಾತು ಕೇಳಿದ್ದು, ಸೆ.28ರಂದು ಮತ್ತೊಂದು ವಿಡಿಯೋ ಕರೆಯಲ್ಲಿ ಕೋರ್ಟ್ ಮಾದರಿ ಹಿನ್ನಲೆ, ನ್ಯಾಯಾಧೀಶರೊಬ್ಬರು ಕುಳಿತಿರುವಂತಿತ್ತು. ನ್ಯಾಯಾಧೀಶನಂತಿದ್ದ ವ್ಯಕ್ತಿ ಶಿವಮೊಗ್ಗದ ನಿವೃತ್ತ ಉದ್ಯೋಗಿಯ ಮಾಹಿತಿ ಕೇಳಿದ್ದರು. ತದನಂತರ 19 ಲಕ್ಷ ರೂ. ಕೊಡಬೇಕು ಎಂದು ಬೆದರಿಸಿದ್ದರು. ಆತಂಕದಲ್ಲಿ ನಿವೃತ್ತ ಉದ್ಯೋಗಿಯು ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಚಿನ್ನದ ಮೇಲೆ ಸಾಲ ಪಡೆದು ವಂಚಕರು ಹೇಳಿದ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವ ಅರಿವಾಗಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net