ಕಟಾವಿನ ಹಂತದವರೆಗೂ ಮಾಡಬೇಕು ಕಾಳಜಿ

20myk1
Published on

ಮಾಯಕೊಂಡ: ರೈತರು ಭತ್ತದ ಬೆಳೆಗೆ ಸಮಗ್ರ ನೀರಿನ ಪೂರೈಕೆ, ರೋಗ- ಕೀಟ ಬಾಧೆ ಸೇರಿ ಕಟಾವಿನ ಹಂತದವರಿಗೂ ಕಾಳಜಿ ವಹಿಸಬೇಕು ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರ್ ಸಲಹೆ ನೀಡಿದರು.

ಹೋಬಳಿಯ ಶಾಗಲೆ ಗ್ರಾಮದಲ್ಲಿ ಇತ್ತೀಚಿಗೆ ಜಲಸಂಪನ್ಮೂಲ ಇಲಾಖೆ ಹಾಗೂ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಧಾರವಾಡ ಇವರು ಸಹಯೋಗದಲ್ಲಿ ಜಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಗ್ರಾಮ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬೆಳೆಗಳಿಗೆ ನೀರನ್ನು ಅಚ್ಚುಕಟ್ಟಾಗಿ ಬಳಕೆ ಮಾಡುವುದರೊಂದಿಗೆ ಜಲ- ನೆಲ ರಕ್ಷಿಸಬೇಕು. ಜತೆಗೆ ತಗುಲುವ ರೋಗ ಹಾಗೂ ಕೀಟ ಬಾಧೆಗಳನ್ನು ತಪ್ಪಿಸಲು ಸೂಕ್ತ ಕೀಟನಾಶಕಗಳನ್ನು ಸಿಂಪಡಣೆ ಮಾಡುವ ಮೂಲಕ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.

ರಸಗೊಬ್ಬರದ ಬದಲು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಮತ್ತು ಕೃಷಿ ಇಲಾಖೆಯಲ್ಲಿ ಸಿಗುವ ಲಘು ಪೋಷಕಾಂಶಗಳನ್ನು ಹಾಕಿದರೆ ಅಡಕೆ ಮರಗಳು ಅಧಿಕ ಇಳುವರಿ ನೀಡುವ ಜತೆಗೆ ದೀರ್ಘಕಾಲ ಬಾಳಿಕೆ ಬರುತ್ತವೆ ಎಂದು ತಿಳಿಸಿದರು.

ವಾಲ್ಮಿ ಸಂಸ್ಥೆಯ ಪ್ರಾಧ್ಯಾಪಕ ಜಿ. ಭೀಮ ನಾಯ್್ಕ ಮಾತನಾಡಿ, ಜಲಾಶಯದಿಂದ ಕಾಲುವೆಗಳ ಮೂಲಕ ಬರುವ ನೀರನ್ನು ಅಚ್ಚುಕಟ್ಟು ನೀರು ಬಳಕೆದಾರರ ಸಂಘ ಸಮಗ್ರ ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಕಾಲಕಾಲಕ್ಕೆ ಬಳಕೆದಾರ ಸಹಕಾರ ಸಂಘಗಳಿಂದ ಸಭೆ ನಡೆಸಿ, ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಅಭಿವೃದ್ಧಿಗೆ ಹಣಕಾಸಿನ ನೆರವು, ನೀರಿನ ಪೂರೈಕೆ ಮತ್ತು ನೀರಿನ ಸದ್ಬಳಕೆ ಕುರಿತು ಚರ್ಚೆ ನಡೆಸಬೇಕು. ನೀರಿನ ಕರ ಸಂಗ್ರಹಣೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ವಾಲ್ಮಿ ಸಂಸ್ಥೆ ಸಹಾಯಕ ಪ್ರಾಧ್ಯಾಪಕರಾದ ನಾಗರಾಜ ತಹಸೀಲ್ದಾರ್ ನಿರೂಪಿಸಿದರು. ಪ್ರದೀಪ್ ದೇವರಮನೆ ಸ್ವಾಗತಿಸಿದರು.

ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷ ಎಂ.ಪಿ. ಕುಬೇರಪ್ಪ, ಕೆ.ಪಿ. ಬಸವರಾಜಪ್ಪ, ಚಂದ್ರಪ್ಪ, ಮುರುಗೇಂದ್ರಪ್ಪ, ರೇಣುಕ ಪ್ರಸಾದ್, ಹೂವಿನ ಮಡು ನೀ.ಬ.ಸ.ಸಂಘದ ನಿರ್ದೇಶಕ ಎಚ್.ಪ್ರಭು, ಸುತ್ತಮುತ್ತಲ ಗ್ರಾಮಸ್ಥರು ಸೇರಿ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net