ನಿವೃತ್ತ ಸೇನಾಧಿಕಾರಿ ಕರ್ನಲ್ ಚೆಪ್ಪುಡೀರ ಎಸ್. ಮುತ್ತಣ್ಣ ಅವರ ಮೇಲೆ ಕಾಡಾನೆ ದಾಳಿ; ಬಲಗಾಲಿಗೆ ಗಾಯ

IMG-20201104-WA0050
Published on

ಕೊಡಗು: ಅಂದಿನ ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಚೆಪ್ಪುಡೀರ ಎಂ. ಪೂಣಚ್ಚ ಅವರ ಪುತ್ರ, ನಿವೃತ್ತ ಸೇನಾಧಿಕಾರಿ ಕರ್ನಲ್ ಸಿ.ಪಿ. ಮುತ್ತಣ್ಣ ಬುಧವಾರ ಕಾಡಾನೆ ದಾಳಿಗೆ ಒಳಗಾಗಿದ್ದಾರೆ. ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷರೂ ಆಗಿರುವ ಆಗಿರುವ ಮುತ್ತಣ್ಣ, ಕೊಡಗಿನ ಪ್ರಖ್ಯಾತ ಪರಿಸರವಾದಿಯಾಗಿದ್ದಾರೆ.

ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದಲ್ಲಿರುವ ತಮ್ಮ ತೋಟದಲ್ಲಿದ್ದಾಗ ಒಂಟಿ ಸಲಗ ದಾಳಿ ನಡೆಸಿತ್ತು. ಮನೆ ಸಮೀಪದಲ್ಲಿಯೇ ಇದ್ದ ತೋಟದಲ್ಲಿದ್ದ ವೇಳೆ ಕಾಡಾನೆ ಕಂಡು ಗಾಬರಿಗೊಂಡು ಕುಸಿದು ಬಿದ್ದರು. ಈ ವೇಳೆ ಕಾಡಾನೆ ದಾಳಿಯಿಂದ ಬಲಗಾಲಿಗೆ ಪೆಟ್ಟಾಗಿದೆ. ಗೋಣಿಕೊಪ್ಪಲು ಖಾಸಗಿ ಕ್ಲಿನಿಕ್ ವೈದ್ಯ ಡಾ.ಚೊಟ್ಟೆಕ್ಮಾಡ ಬಿಷನ್ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಲಗಾಲಿಗೆ ಸಣ್ಣಮಟ್ಟದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕೊಡಗಿನ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕರ್ನಲ್ ಮುತ್ತಣ್ಣ ಸುಪ್ರೀಂಕೋರ್ಟ್, ಹೈಕೋರ್ಟ್ ಗಳಲ್ಲಿ ದಾವೆ ಹೂಡುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. ಆ ಕಾರಣಕ್ಕಾಗಿಯೇ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆಂದು ಜನಪ್ರತಿನಿಧಿಗಳು, ರಾಜಕೀಯ ನೇತಾರರು ಅವರ ಬಗ್ಗೆ ಅಸಮಾಧಾನ ಕೂಡ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net