ಸೇನೆಯಲ್ಲಿರುವ ಅವಕಾಶಗಳ ಸದುಪಯೋಗವಾಗಲಿ ವಾಯುಸೇನೆ ನಿವೃತ್ತ ಅಧಿಕಾರಿ ಮಾಧವಚಂದ್ರ ಪಂಢರಾಪುರ ಆಶಯ

31 ylp 01 (kargil)
Published on

ಯಲ್ಲಾಪುರ: ಸೇನೆಯಲ್ಲಿ ಸೇವೆ ಸಲ್ಲಿಸಲು ವಿಪುಲ ಅವಕಾಶಗಳಿದ್ದು, ಯುವಕರು ಸದುಪಯೋಗಪಡಿಸಿಕೊಳ್ಳಬೇಕು. ದೇಶ ಸೇವೆಯೊಂದಿಗೆ ದೇಶಭಕ್ತಿ, ಶಿಸ್ತು, ಆತ್ಮವಿಶ್ವಾಸ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಾಯುಸೇನೆಯ ನಿವೃತ್ತ ಜೂನಿಯರ್ ವಾರೆಂಟ್ ಅಧಿಕಾರಿ ಮಾಧವಚಂದ್ರ ಪಂಢರಾಪುರ ಹೇಳಿದರು.


ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ವತಿಯಿಂದ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಕಾರ್ಗಿಲ್ ವಿಜಯ ದಿವಸದ 25ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಸೈನಿಕರಿಗೊಂದು ಸೆಲ್ಯೂಟ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಅಗ್ನಿವೀರ್ ಎಂಬ ಯೋಜನೆಯ ಮೂಲಕ ಸೈನ್ಯ ಸೇರುವ ಆಸಕ್ತರಿಗೆ ಉತ್ತಮ ಅವಕಾಶ ಮಾಡಿಕೊಡಲಾಗಿದೆ ಎಂದ ಅವರು, ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ತಮ್ಮ ಅನುಭವ ಹಂಚಿಕೊಂಡರು.


ವಿಶ್ವದರ್ಶನ ಶಿಕ್ಷಣ ಸಮೂಹ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾವು ಮಾಡುವ ಕಾರ್ಯವನ್ನೇ ದೇಶಕ್ಕೆ ಪೂರಕವಾಗಿ, ಯೋಧರಂತೆ ಮಾಡಬೇಕು. ಈ ಸಂಕಲ್ಪ ಮಾಡಿದರೆ ಕಾರ್ಗಿಲ್ ವಿಜಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು ರೂಪಿಸಿದ ಕಾರ್ಗಿಲ್ ವಿಶೇಷ ಸಂಚಿಕೆ, ವಿಡಿಯೋ ಮತ್ತು ರೇಡಿಯೋ ಕಾರ್ಯಕ್ರಮಗಳ ಅನಾವರಣ ಮಾಡಲಾಯಿತು.


ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಉಪಸ್ಥಿತರಿದ್ದರು. ಗುರು ಕಲ್ಮಠ ಸ್ವಾಗತಿಸಿದರು. ನಾಗರಾಜ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಲ್ಲವಿ ಮರಾಠಿ, ವಾಣಿ ಭಟ್ಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net