

ರಿಪ್ಪನ್ಪೇಟೆ: ಶೌರ್ಯಕ್ಕೆ ಹೆಸರಾಗಿರುವ ರಜಪೂತ ಜನಾಂಗದವರು ರಾಜ್ಯಾದ್ಯಂತ ಇದ್ದಾರೆ. ಆದರೆ ಅವರ ಜೀವನೋಪಾಯ ಮಾರ್ಗಗಳನ್ನು ಅವಲಂಬಿಸಿಕೊಂಡು ವಿಘಟಿತರಾಗಿದ್ದಾರೆ. ಬದಲಾಗುತ್ತಿರುವ ಸಮಾಜಸ್ಥಿತಿಯಲ್ಲಿ ರಜಪೂತರು ಸಂಘಟಿತರಾಗುವ ಅಗತ್ಯವಿದೆ ಎಂದು ರಾಜ್ಯ ರಜಪೂತ್ ಹಿತಚಿಂತಕರ ವೇದಿಕೆ ಗೌರವಾಧ್ಯಕ್ಷ ಹಾಗೂ ನಿವೃತ್ತ ಎಸಿಪಿ ಸಂಗ್ರಾಮ್ಂಗ್ ಹೇಳಿದರು.
ಸಮೀಪದ ವಡಗೆರೆಯಲ್ಲಿ ಕರ್ನಾಟಕ ರಜಪೂತ್ ಹಿತಚಿಂತಕರ ವೇದಿಕೆ ಹಾಗೂ ಹೊಸನಗರ ತಾಲೂಕು ರಜಪೂತ್ ಸಮಾಜ ಏರ್ಪಡಿಸಿದ್ದ ಜನಾಂಗದ ಹಿತಚಿಂತನೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಡಗೆರೆ ಗ್ರಾಮವೆಂಬ ಪುಣ್ಯಭೂಮಿ 4 ಜನ ಯೋಧರನ್ನು ದೇಶಸೇವೆಗೆ ಕಳುಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳಾಗಿಯೂ ಯುವಕರು ರೂಪುಗೊಳ್ಳಬೇಕೆಂಬುದು ನನ್ನ ಬಯಕೆ. ಕಾರಣ ಇಲ್ಲಿನ ಮಣ್ಣಿನ ಗುಣ ಹಾಗೂ ಜನತೆಗೆ ಅಂತಹ ತಾಕತ್ತಿದೆ. ಶಿಕ್ಷಣ, ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಇಲ್ಲಿನ ಯುವಕರು ಸಾಧನೆ ಮಾಡಿರುವುದು ಪುಟ್ಟ ಗ್ರಾಮದ ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.
ರಾಜ-ಮಹರಾಜರ ಕಾಲದಲ್ಲಿ ಶೌರ್ಯ, ತ್ಯಾಗ, ಧೈರ್ಯದಿಂದ ಆಡಳಿತ ನಡೆಸುವ ಮೂಲಕ ಸಮಾಜದ ಇತರ ಜನಗಳೊಂದಿಗೆ ಸಾಮರಸ್ಯ ಸಾಧಿಸಿಕೊಂಡು ರಜಪೂತರು ವಿಶೇಷವಾಗಿ ಗುರುತಿಸಿಕೊಂಡಿದ್ದರು. ಹಿಂದಿನ ಇತಿಹಾಸವನ್ನು ಮನನ ಮಾಡಿಕೊಂಡು ಪ್ರಸ್ತುತ ಸಮಾಜದಲ್ಲಿ ರಜಪೂತರು ಮುಖ್ಯವಾಹಿನಿಗೆ ಬರಬೇಕಿದ್ದು ಇದಕ್ಕೆ ಸಂಘಟನೆಯೇ ಸರ್ವಶಕ್ತಿ ಎಂದರು.
ಸರ್ಕಾರಿ ಪ್ರಾಥಮಿಕ ಶಾಲೆಗೆ ಜಮೀನು ದಾನ ಮಾಡಿದ ಕುಟುಂಬದ ಧರ್ಮಸಿಂಗ್, ನಿವೃತ್ತ ಯೋಧರಾದ ಮಂಜುಸಿಂಗ್, ಕೊಲ್ಲೂರಸಿಂಗ್, ರತನ್ಸಿಂಗ್ ಹಾಗೂ ಕರ್ತವ್ಯನಿರತ ಯೋಧ ಜಗದೀಶ್ಸಿಂಗ್ ತಾಯಿ ಸುಭದ್ರಾ ಬಾಯಿ, ಹಿರಿಯರಾದ ರಾಮ್ಂಗ್, ಕೊಲ್ಲೂರಸಿಂಗ್, ಸುರೇಶ್ಸಿಂಗ್, ಗಣೇಶ್ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ರಾಜ್ಯ ರಜಪೂತ್ ಸಮಾಜದ ಅಧ್ಯಕ್ಷ ಗಣೇಶ್ಸಿಂಗ್ ಬ್ಯಾಳಿ, ಉಪಾಧ್ಯಕ್ಷರಾದ ಕೆ.ಸಿ.ಸಿಂಗ್, ಬಾಲಾಜಿಸಿಂಗ್, ಪ್ರಮುಖರಾದ ಚಾಂದ್ಸಿಂಗ್, ವಿಶ್ವನಾಥಸಿಂಗ್, ಶ್ರೀನಿವಾಸ, ಉಮೇಶ ಸಿಂಗ್ ಇದ್ದರು.