ಕೃಷಿಗೆ ಬೇಡಿಕೆ ಕಡಿಮೆ ಆಗದಿರಲಿ,ಡಾ.ಅಶೋಕ ದಳವಾಯಿ ಸಲಹೆ

retire ias officer dr.ashok dalavayi agriculture koppal inauguration ayodhya crop acadami
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಯೋಧ್ಯಾ ಕ್ರಾಪ್ ಅಕ್ಯಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಅಶೋಕ ದಳವಾಯಿ ಮಾತನಾಡಿದರು. ಅಭಿನವ ಗವಿಶ್ರೀಗಳು, ಬಸವರಾಜ ಪಾಟೀಲ್ ಸೇಡಂ, ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ ಇದ್ದರು.
Published on

ಕೊಪ್ಪಳ:ಕೃಷಿ ಎಂದು ನಶಿಸುವುದಿಲ್ಲ. ಮಾನವ ಹುಟ್ಟಿನಿಂದ ಇದೆ. ಕೃಷಿಗೆ ಬೇಡಿಕೆ ಕಡಿಮೆ ಆಗಬಾರದು. ಅದರಂತೆ ನೋಡಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಅಶೋಕ ದಳವಾಯಿ ಹೇಳಿದರು.

ನಗರದ ಅಯೋಧ್ಯಾ ಕ್ರಾಪ್ ಅಕ್ಯಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಕೃಷಿ ಜಗತ್ತಿನ ಬೆನ್ನೆಲುಬು. ಮಾನವ ನಾಗರಿಕತೆ ಆರಂಭದಿಂದ ಇದೆ. ಆಧುನಿಕ ಸಮಾಜ ಒಂದೆಡೆ ನೆಲೆ ನಿಲ್ಲಲು ಕೃಷಿ ಕಾರಣ. ಜಗತ್ತಿನ 11 ಕಡೆಗಳಲ್ಲಿ ಕೃಷಿ ಮೂಲಕ ನಾಗರಿಕತೆ ಆರಂಭವಾಯಿತು.

ನಮ್ಮ ಭಾರತವೂ ಒಂದು. ಅತಿಯಾದ ಖನಿಜ ಬಳಕೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಈ ಶತಮಾನದ ಅಂತ್ಯಕ್ಕೆ 4 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆ ಆಗಲಿದೆ. ನೈಸರ್ಗಿಕವಾಗಿ ದೊರೆವ ವಸ್ತುಗಳನ್ನು ಕಚ್ಛಾ ವಸ್ತುವಾಗಿ ಬಳಕೆ ಮಾಡುವುದು ಹೆಚ್ಚಿಸಬೇಕಿದೆ ಎಂದರು.

ಗುಣಮಟ್ಟದಿಂದ ಕೂಡಿದ ಕೃಷಿ ಉತ್ಪಾದನೆ ಹೆಚ್ಚಬೇಕು. ಸದ್ಯ ದೇಶದಲ್ಲಿ 80 ಮಿಲಿಯನ್ ಟನ್ ಕೃಷಿ ಉತ್ಪನ್ನ ಹಾಳಾಗುತ್ತಿದೆ. ಅದನ್ನು ತಡೆಗಟ್ಟಬೇಕು. ಜಗತ್ತಿನ ಮಾರುಕಟ್ಟೆ ಅರಿಯಬೇಕು.

ಅದರ ಏರಿಳಿತ ಕಂಡು ಕೃಷಿ ಮಾಡಿ. ರೈತ ಉತ್ಪಾದನಾ ಸಂಸ್ಥೆಗಳ ಮೂಲಕ ನೂರಾರು ರೈತರು ಕೂಡಿ ಮಾರುಕಟ್ಟೆ ಮಾಡಲು ಯತ್ನಿಸಿ.

ಕೇಂದ್ರ ಸರ್ಕಾರವೂ 2024ರ ವೇಳೆಗೆ ದೇಶಾದ್ಯಂತ 10 ಸಾವಿರ ಎಫ್‌ಪಿಒ ಆರಂಭಕ್ಕೆ ಪ್ರೋತ್ಸಾಹ ನೀಡಿದೆ. ಈ ನಿಟ್ಟಿನಲ್ಲಿ ಅಯೋಧ್ಯಾ ಕ್ರಾಪ್ ಅಕ್ಯಾಡೆಮಿ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕಾಯಕವಿಲ್ಲದೆ ಜಗತ್ತಿಲ್ಲ. ಸೃಷ್ಟಿ ತನ್ನ ಕೆಲಸ ನಿರಂತರ ಮಾಡುತ್ತದೆ. ನಾವು ದುಡಿಯಬೇಕು. ನಾವು ಬದುಕಲು, ಇನ್ನೊಬ್ಬರನ್ನು ಬದುಕಿಸಲು ದುಡಿಯೋಣ.

ಕೌಶಲಪೂರ್ಣವಾಗಿ ದುಡಿಮೆ ಇರಲಿ. ಹೊಸತನ, ಪ್ರೀತಿ ಇರಬೇಕು. ಮಣ್ಣನಿಂದಲೇ ಎಲ್ಲ. ಇದಿಲ್ಲದೇ ಏನಿಲ್ಲ. ಅದನ್ನು ಉಳಿಸಿ ಎಂದರು.
ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಸಂಸ್ಥೆ ಸಂಸ್ಥಾಪಕ ಡಾ.ಎಂ.ಬಿ.ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕ ಕೆ.ಶರಣಪ್ಪ, ಪ್ರಮುಖರಾದ ವೀರಬಸಪ್ಪ ಪಟ್ಟಣಶೆಟ್ಟಿ, ಶಂಕರಪ್ಪ ಚೌಡಿ, ದೇವೇಂದ್ರ ಬಳೂಟಗಿ, ಯಂಕಣ್ಣ ಯರಾಶಿ , ನಾಗರಾಜ ದೇಸಾಯಿ, ವೀರಣ್ಣ ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net