ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಸಮುದ್ರ ಕೊರೆತ ತಪ್ಪಿಸಲು ತುರ್ತು ತಡೆಗೋಡೆ: ಸಚಿವ ಮಂಕಾಳ ವೈದ್ಯ

beach visit
ಸಸಿಹಿತ್ಲು ಮುಂಡಾ ಬೀಚ್ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಪರಿಶೀಲಿಸಿದರು.
Published on

ಹಳೆಯಂಗಡಿ: ಸಸಿಹಿತ್ಲು ಪ್ರದೇಶ ರಕ್ಷಣೆ ಹಾಗೂ ಪ್ರವಾಸೋದ್ಯಮ ಮತ್ತು ಮೀನುಗಾರಿಕೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಒಂದು ಕಿ.ಮೀ. ತುರ್ತು ತಡೆಗೋಡೆ ನಿರ್ಮಿಸಲಾಗುವುದು ಎಂದು ರಾಜ್ಯ ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.
ಅಂತಾರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್‌ಗೆ ಶುಕ್ರವಾರ ಭೇಟಿ ನೀಡಿ ಮೀನುಗಾರಿಕಾ ಜೆಟ್ಟಿಯ ಮುಂದಿನ ಹಂತದ ಕಾಮಗಾರಿ ಬೇಡಿಕೆ ಪರಿಶೀಲಿಸಿದರು.

ಬಡ ವರ್ಗ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಭಿವೃದ್ಧಿ ನಡೆಸುವ ಸರ್ಕಾರ ನಮ್ಮದು. ಬಡವರ ಧ್ವನಿಯಾಗಿ ಸೇವೆ ನೀಡುತ್ತೇವೆ. ಬಡ ಮೀನುಗಾರರ ಮನೆ ರಕ್ಷಣೆ ಮತ್ತು ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡ ಮುಂಡಾ ಬೀಚ್ ಉಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗ ನಡೆಯುವ ಕಾಮಗಾರಿಗಳ ಲೋಪ ಗುರುತಿಸಿ ಯಾವುದೇ ಹಾನಿಯಾಗದಂತೆ ಅನುಭವಿ ಮೀನುಗಾರರ ಸಲಹೆ ಹಾಗೂ ವೈಜ್ಞಾನಿಕ ತತ್ವ ಆಧಾರದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು. ಕೆಪಿಸಿಸಿ ಕೋ-ಆರ್ಡಿನೇಟರ್ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಗ್ರಾಪಂ ಸದಸ್ಯರಾದ ಪದ್ಮಾವತಿ ಶೆಟ್ಟಿ, ಜಲಜಾ ಪಾಣರ್, ಅನಿಲ್ ಪೂಜಾರಿ, ಚಂದ್ರಕುಮಾರ್, ಅಬ್ದುಲ್ ಅಜೀಜ್, ಮೂಲ್ಕಿ ನಪಂ ಸದಸ್ಯ ಪುತ್ತುಬಾವ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಾಣಿಕ್ಯ, ಮೂಲ್ಕಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಹಳೆಯಂಗಡಿ ಪಂಚಾಯಿತಿ ವಿ.ಎ.ಸುರೇಶ್, ಕಾರ್ಯದರ್ಶಿ ಕೇಶವ, ಧರ್ಮಾನಂದ ಶೆಟ್ಟಿಗಾರ್, ಯೂಸುಫ್, ತೇಜಾಕ್ಷಿ ಮೆಂಡನ್, ಕದಿಕೆ ಮೊಗವೀರ ಸಭಾ ಅಧ್ಯಕ್ಷ ರೋಹಿತಾಕ್ಷ ಎಚ್.ಅಮೀನ್, ಮಹಿಳಾ ಸಭಾ ಕೋಶಾಧಿಕಾರಿ ಪ್ರಮೀಳಾ ಚಂದ್ರಶೇಖರ್, ಸಚಿನ್ ಕುಕ್ಯಾನ್, ಸೀತಾರಾಮ್ ಸಾಲ್ಯಾನ್ ಲೈಟ್‌ಹೌಸ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಇಂಜಿನಿಯರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಂಭವಿ ಮತ್ತು ನಂದಿನಿ ನದಿ ಸಂಗಮಗೊಂಡು ಸಮುದ್ರ ಸೇರುವ ರಮಣೀಯ ಪ್ರದೇಶ ಇದು. ಸಮುದ್ರ ಕೊರೆತದಲ್ಲಿ ಸುಮಾರು ಎರಡು ಎಕರೆ ಭೂಮಿ ಸಮುದ್ರಪಾಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಡೆಸಲಾದ ಹೆಚ್ಚಿನ ಕಾಮಗಾರಿಗಳನ್ನು ಸಮುದ್ರ ಆಪೋಷನ ಪಡೆದಿದೆ. ಪ್ರವಾಸೋದ್ಯಮ ಹಾಗೂ ಜನತೆಯ ಬದುಕಾದ ಮೀನುಗಾರಿಕೆ ಅಭಿವೃದ್ಧಿಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.-ಮಿಥುನ್ ರೈ, ಕೆಪಿಸಿಸಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net