

ರಾಯಚೂರು: ನಗರಸಭೆಯ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರನ್ನು ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಚಾಲಕರಿಗೆ ಸೇವಾ ಭದ್ರತೆ ಒದಗಿಸಬೇಕು. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ, ಕಸ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರು, ಲೋಡರ್‌ಗಳು ಮತ್ತು ಕ್ಲೀನರ್‌ಗಳನ್ನು ನೇರ ವೇತನ ಪಾವತಿಯಡಿ ತಂದು ಏಕ ಕಾಲಕ್ಕೆ ಪೌರ ಕಾರ್ಮಿಕರೆಂದು ಪರಿಗಣಿಸಿ ಕಾಯಂಗೊಳಿಸಬೇಕು.
ಏಳನೇ ವೇತನ ಆಯೋಗದ ಪ್ರಕಾರ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದ ಮೇಲೆ ವಾಹನಗಳ ಚಾಲಕರು, ಲೋಡ್‌ಗಳು ಮತ್ತು ಕ್ಲೀನರ್‌ಗಳಿಗೆ ಸಮಾನ ವೇತನ ನೀಡಬೇಕು. ಚಾಲಕರಿಗೆ ಮಾಸಿಕ ವೇತನ 17,500 ರೂ.ನಿಂದ 35 ಸಾವಿರ ರೂ.ಗೆ ವೇತನ ಹೆಚ್ಚಳ ಮಾಡಬೇಕು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಒಳಗೊಂಡಂತೆ ಇತರೆ ಎಲ್ಲ ಕಾರ್ಮಿಕರು ಮರಣ ಹೊಂದಿದಲ್ಲಿ ಅವರ ಅವಲಂಬಿತರಿಗೆ ತಕ್ಷಣವೇ 10 ಲಕ್ಷ ರೂ. ಪರಿಹಾರ ನೀಡಬೇಕು. ಅನುಕಂಪದ ನೇಮಕಾತಿಯಡಿ ಅವಲಂಬಿತರನ್ನು ಸೇವೆಗೆ ತೆಗೆದುಕೊಳ್ಳಬೇಕು.
ಎಲ್ಲರಿಗೂ ವಸತಿ ಸೌಲಭ್ಯ, ಮಕ್ಕಳಿಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಬೇಕು. ಅಕಾರಿಗಳು ಮತ್ತು ಸಾರ್ವಜನಿಕರು ಪೌರ ಕಾರ್ಮಿಕರೊಂದಿಗೆ ಗೌರವ ಮತ್ತು ಘನತೆಯಿಂದ ವರ್ತಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಪದಾಕಾರಿಗಳಾದ ಮಾರೆಪ್ಪ ಹರವಿ, ಚಂದಾಸಾಬ್ ಬೆಳ್ಳಿಗನೂರು, ಹುಸೇನಪ್ಪ, ವೀರೇಶ, ಅಮರೇಶ ಜವಳಗೇರಾ, ದುರುಗಪ್ಪ, ಹನುಮಂತ, ದುರುಗೇಶ. ಡಿ.ನಾಗರಾಜ, ಕೆಂಚಪ್ಪ ಪಾಲ್ಗೊಂಡಿದ್ದರು.