ಮೀಟರ್ ಬಡ್ಡಿ ಕಿರುಕುಳಕ್ಕೆ ಚಿಲ್ಲರೆ ಅಂಗಡಿ ವ್ಯಾಪಾರಿ ಬಲಿ

01.jpg
Published on

ಚಿಕ್ಕಬಳ್ಳಾಪುರ:ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ನೊಂದ ಚಿಲ್ಲರೆ ಅಂಗಡಿ ವ್ಯಾಪಾರಸ್ಥರೊಬ್ಬರು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗೇಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಪೂಲವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 55 ವರ್ಷದ ಭಾಸ್ಕರ್ ಮೃತ ದುರ್ದೈವಿ. ಬಾಗೇಪಲ್ಲಿ ಪಟ್ಟಣದ ಹಳೇ ಎಸ್ ಬಿ ಐ ರಸ್ತೆಯಲ್ಲಿ ಕಾಂಡಿಮೆಂಟ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಭಾಸ್ಕರ್ ಸ್ಥಳೀಯವಾಗಿ ಬಡ್ಡಿ ವ್ಯವಹಾರ ಸಡೆಸುವವರ ಬಳಿ ಕೈ ಸಾಲ ಪಡೆದುಕೊಂಡಿದ್ದ. ಒಂದು ಲಕ್ಷ ರೂಪಾಯಿ ಸಾಲಕ್ಕೆ ದಿನಕ್ಕೆ ಒಂದು ಪರ್ಸೆಂಟ್ ಮೀಟರ್ ಬಡ್ಡಿ ನಿಗದಿಪಡಿಸಿರುವ ಬಡ್ಡಿ ದಂಧೆಕೋರರು ಹಣಕ್ಕಾಗಿ ಭಾಸ್ಕರ್ ಅಂಗಡಿ ಮುಂದೆ ಬಂದು ಗಲಾಟೆ ಮಾಡಿದ್ದಲ್ಲದೇ ಸಾಕಷ್ಟು ಬಾರಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರ ಮನನೊಂದ ಭಾಸ್ಕರ್  ಡೆತ್ ನೋಟ್ ಬರೆದು ಪೂಲವಾರಪಲ್ಲಿ ಗ್ರಾಮದ ಬಳಿಯ ಜಮೀನೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಘಟನೆ ಸಂಬಂಧ ಬಾಗೇಪಲ್ಲಿ ಪಟ್ಟಣದ ಅಶೋಕ್ ,  ಪ್ರಭಾಕರ್ ನಾಯ್ಡು , ವೆಂಕಟಸ್ವಾಮಿ, ಕಿರಣ್ ಹಾಗೂ ಅಶ್ವಥ ರೆಡ್ಡಿ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

*ಜಮೀನು ಮಾರಾಟಕ್ಕೆ ಇಟ್ಟಿದ್ದೇವೆ, ಮಾರಾಟ ಆದ ತಕ್ಷಣ ಸಾಲದ ಹಣ ವಾಪಸ್ಸು ಮಾಡುವುದಾಗಿ ನಮ್ಮ ಕುಟುಂಬದ ಎಲ್ಲರೂ ಬೇಡಿಕೊಂಡರು ಸಹ ಬಡ್ಡಿಕೋರರು ಮನೆ ಬಳಿ ಬಂದು ಗಲಾಟೆ ಮಾಡಿದರು. ಹಲವು ಬಾರಿ  ಅವಮಾನಿಸಿದ್ದಾರೆ. ಇದನ್ನು ತಾಳಲಾರದೆ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ತಂದೆ ಭಾಸ್ಕರ್  ಸಾವಿಗೆ ಕಾರಣರಾದ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದೆ ಎಂದುಮೃತನ ಮಗ ಸಂತೋಷ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net