

ವಿಜಯವಾಣಿ ಸುದ್ದಿಜಾಲ ವಿಜಯಪುರ
ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದೇನಹಳ್ಳಿ ರೈತನಿಗೆ ಸೇರಿದ್ದು ಎನ್ನಲಾದ ಜಾಗವನ್ನು ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಅಧಿಕಾರಿಗಳು ಅಕ್ರಮವಾಗಿ ಬೇರೆಯವರಿಗೆ ಖಾತೆ ಮಾಡಿಕೊಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮರುಸರ್ವೇ ನಡೆಸಿದರು.
ಗೊಡ್ಲುಮುದ್ದೇನಹಳ್ಳಿ ಗ್ರಾಮದ ಸರ್ವೇ ನಂಬರ್ 13/5 ರಲ್ಲಿನ 26.5 ಗುಂಟೆ ಜಾಗವನ್ನು ರೈತನ ಗಮನಕ್ಕೆ ತರದೆ ಹಣದ ಆಮಿಷಕ್ಕೆ ಇಂಥ ಕೃತ್ಯ ಎಸಗಿದ್ದಾರೆ ಎಂದು ಗ್ರಾಮದ ಗೋವಿಂದಪ್ಪ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ದೂರು ಸಲ್ಲಿಸಲಾಗಿತ್ತು, ಅದರ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮರುಸರ್ವೇ ನಡೆಸುವ ಮೂಲಕ ಜಾಗ ಗುರುತಿಸಿಕೊಟ್ಟು ಮರುವಶಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಪೊಲೀಸರ ಸಹಕಾರ:
ವಿಜಯಪುರ ಪೊಲೀಸರ ಸಹಕಾರದೊಂದಿಗೆ ತಾಲೂಕು ಸರ್ವೆಯರ್ ಕಾರ್ತಿಕ್ ಹಾಗೂ ಸಿಬ್ಬಂದಿ ಸರ್ವೇ ನಂಬರ್ 13/5 ರಲ್ಲಿನ 26.5 ಗುಂಟೆ ಜಾಗವನ್ನು ಬಂದೋಬಸ್ತ್ ಮಾಡಿಕೊಡುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿದರು.