

ಸವಣೂರ: ಧರ್ಮ ಸಂಸ್ಕೃತಿಗಳ ಅರಿವು, ಆಚರಣೆಯಿಂದ ಜಗದಲ್ಲಿ ಸಾಮರಸ್ಯ, ಸೌಹಾರ್ದ ಬೆಳೆಯಲು ಸಾಧ್ಯ. ಸಂಸ್ಕೃತಿಯ ಪುನರುತ್ಥಾನದಿಂದ ಜೀವನದಲ್ಲಿ ಸುಖ-ಶಾಂತಿ ದೊರಕುತ್ತದೆ ಎಂದು ಹಿರೇಮಣಕಟ್ಟಿ ಮುರುಘೕಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯರು ತಿಳಿಸಿದರು
ಶ್ರಾವಣ ಮಾಸ ಸಂಪನ್ನ ಅಂಗವಾಗಿ ಪಟ್ಟಣದ ಶ್ರೀ ಜಗದ್ಗುರು ರೇಣುಕಾಚಾರ್ಯರ ನಗರದ ಶ್ರೀ ರೇಣುಕ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮ ಸಮಾರಂಭ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಉಪದೇಶಾಮೃತ ನೀಡಿದರು. ಸರ್ವ ಧರ್ಮದವರನ್ನು ಸಮಾನತೆಯಿಂದ ಕಾಣುವ ಗುಣ ಹಾಗೂ ಪ್ರಾಚೀನ ಕಾಲದಿಂದಲೂ ವೀರಶೈವ ಧರ್ಮಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರದಾಗಬೇಕು. ವೀರಶೈವ ಧರ್ಮಕ್ಕೆ ತನ್ನದೇ ಆದ ಸಂಸ್ಕೃತಿಯಿದ್ದು ಇತರ ಸಮುದಾಯದವರನ್ನು ಅನ್ಯೋನ್ಯತೆಯಿಂದ ಕಾಣುವ ಗುಣ ಇದೆ. ಇಂಥ ಧರ್ಮದಲ್ಲಿ ಹುಟ್ಟಿದವರು ಪ್ರತಿಯೊಬ್ಬರೂ ಅದೃಷ್ಟವಂತರು. ಧರ್ಮ ಬೆಳವಣಿಗೆಗೆ ಪ್ರತಿಯೊಬ್ಬರ ಶ್ರಮ ಅಗತ್ಯ. ಯುವಕರು ಧರ್ಮಪಾಲನೆ ಮಾಡಬೇಕಾದರೆ ಅವರನ್ನು ಸದ್ಧರ್ಮದಲ್ಲಿ ನಡೆಯುವಂತೆ ಮಾಡುವುದು ಹಿರಿಯರ ಜವಾಬ್ದಾರಿ ಆಗಿದೆ. ಇಂದಿನ ಯುವ ಪೀಳಿಗೆ ಆಧುನಿಕತೆಯ ವೈಚಾರಿಕತೆಯ ಭರದಲ್ಲಿ ಧರ್ಮ, ಸಂಸ್ಕೃತಿ, ಶ್ರದ್ಧೆ ಭಕ್ತಿಯನ್ನು ಮರೆಯುತ್ತಿದ್ದು, ಧರ್ಮ ಜಾಗೃತಿ ಎಲ್ಲೆಡೆ ಬೇರೂರುವಂತೆ ಮಾಡುವುದು ಪ್ರತಿಯೊಬ್ಬ ಹಿರಿಯರ ಕರ್ತವ್ಯವಾಗಿದೆ ಎಂದರು.
ರೇಣುಕಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ರವತಪ್ಪ ಬಿಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದನ್ವಯ ಶ್ರಾವಣ ಮಾಸದಾದ್ಯಂತ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಅಭಿಷೇಕ ಸೇರಿ ವಿವಿಧ ಧಾರ್ವಿುಕ ಕೈಂಕರ್ಯಗಳನ್ನು ನೆರವೇರಿಸಿದ್ದ ಹಿರೇಮಠದ ಜಗನ್ನಾಥಶಾಸ್ತ್ರೀ ಅವರನ್ನು ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.
ಪ್ರಮುಖರಾದ ಮಹೇಶ ಸಾಲಿಮಠ, ಬಸನಗೌಡ್ರ ಪಾಟೀಲ, ಬಸವರಾಜ ನೀರಲಗಿ, ವಿಜಯಕುಮಾರ ಗಂಧದಮಠ, ಸಂದೀಪ ಚರಂತಿಮಠ, ರೇಣುಕಾಚಾರ್ಯ ಸೇವಾ ಸಮಿತಿ ಪದಾಧಿಕಾರಿಗಳಾದ, ಗುರುಪಾದಪ್ಪ ಶಿಗ್ಗಾಂವಿ, ಬಸಯ್ಯ ಮಹಂತಿನಮಠ, ಬಸವರಾಜ ಕುಲಕರ್ಣಿ, ಸಂಕ್ರಪ್ಪ ತಿಮ್ಮಣ್ಣ, ಈರಪ್ಪ ಕಾಳಶೆಟ್ಟಿ, ನಾಗಪ್ಪ ಕಾಳಶೆಟ್ಟಿ, ಈರಯ್ಯ ಹಿರೇಮಠ, ಫಕೀರಯ್ಯ ಹಿರೇಮಠ ಪಾಲ್ಗೊಂಡಿದ್ದರು. ಧರ್ಮ ಸಮಾರಂಭದ ನಂತರ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಸಾದ ಸೇವಿಸಿದ ನೂರಾರು ಭಕ್ತರು ಸಾರ್ಥಕಭಾವ ಮೆರೆದರು.
ಪ್ರಾತಃಕಾಲ ಹಿರೇಮಠದ ಜಗನ್ನಾಥಶಾಸ್ತ್ರೀ ಅವರ ನೇತೃತ್ವದಲ್ಲಿ ರೇಣುಕಾಚಾರ್ಯರ ಮಂಗಲ ಮೂರ್ತಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಪುಷ್ಪಾರ್ಚನೆ ಸೇರಿ ವಿವಿಧ ಧಾರ್ವಿುಕ ಕಾರ್ಯ ವಿಧ್ಯುಕ್ತವಾಗಿ ನೆರವೇರಿದವು.