ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ಪುನರಾರಂಭ

Vijayavani-Featured-Image
Published on

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀರು ಹಾಗೂ ವಿದ್ಯುತ್ ಬಿಲ್ ಪಾವತಿಸದ ಕಾರಣ ಸ್ಥಗಿತಗೊಳಿಸಿದ್ದ ಸೇವೆಯನ್ನು ಶುಕ್ರವಾರ ಪುನಾರಂಭ ಮಾಡಲಾಗಿದೆ.

ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರಗಳಲ್ಲಿ ಒದಗಿಸುತ್ತಿದೆ.

ಗುತ್ತಿಗೆ ಪಡೆದಿರುವ ಕಂಪನಿಯು ಸಲ್ಲಿಸಿರುವ ಬಿಲ್‌ಗಳಲ್ಲಿ ಬಾಕಿ ಮೊತ್ತ ಅಂದಾಜು 40 ಕೋಟಿ ರೂ. ಪಾವತಿಸದ ಕಾರಣ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯಲ್ಲಿ ನೀರಿನ ಮತ್ತು ವಿದ್ಯುತ್ ಬಿಲ್‌ಗಳನ್ನು ಪಾವತಿಸದೇ ಇರುವುದರಿಂದ ಜು.18ರಂದು ಸ್ಥಗಿತಗೊಳಿಸಲಾಗಿತ್ತು.

ಈ ವಿಚಾರವಾಗಿ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ನೀರು ಮತ್ತು ವಿದ್ಯುತ್ ಬಿಲ್‌ನ್ನು ಸಂಬಂಧಿಸಿದ ಕಂಪನಿಯೇ ಪಾವತಿಸಬೇಕಿದೆ. ಈ ಕುರಿತು ಗುರುವಾರ ಮುಖ್ಯ ಆರೋಗ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಕಂಪನಿಯ ಪ್ರತಿನಿಧಿ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾದೆ. ಹಾಗಾಗಿ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸುವಂತೆ ಸೂಚಿಸಿದಂತೆ ಶುಕ್ರವಾರದಿಂದ ಪುನಾರಂಭಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಗುತ್ತಿಗೆ ಕಂಪನಿಗೆ ಎಚ್ಚರಿಕೆ:

ಒಡಂಬಡಿಕೆ ಪ್ರಕಾರ ಕೆಲಸ ಮಾಡದ ಗುತ್ತಿಗೆ ಕಂಪನಿಯ ನಡೆಗೆ ಪಾಲಿಕೆ ಅಧಿಕಾರಿಗಳು ಗರಂ ಆಗಿದ್ದಾರೆ. ಯಾವುದೇ ಸಮಸ್ಯೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳದೆ ಏಕಾಏಕಿ ಕ್ಯಾಂಟೀನ್‌ಗಳಲ್ಲಿ ಸೇವೆ ಸ್ಥಗಿತಗೊಳಿಸಿದ ರೀತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಪ್ರಸಂಗ ಪುನರಾವರ್ತನೆಗೊಂಡಲ್ಲಿ ಕಾನೂನು ರೀತಿ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಗುತ್ತಿಗೆ ಕಂಪನಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net