ಮೈಸೂರಲ್ಲಿ ಮಹಿಳಾ ಮತದಾರರಿಂದಲೇ ಹೆಚ್ಚಿನ ಮತದಾನ

37
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಕ್ಷೇತ್ರದಲ್ಲಿ ಈ ಬಾರಿ ಶೇ.70.62ರಷ್ಟು ಮತದಾನವಾಗಿದ್ದು, ಮಹಿಳಾ ಮತದಾರರೇ ಪುರುಷ ಮತದಾರರಿಗಿಂತ ಮುಂದಿದ್ದಾರೆ. 7,44,927 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದರೆ, 7,32,605 ಪುರುಷ ಮತದಾನ ಮಾಡಿದ್ದಾರೆ. ಹೀಗಾಗಿ ಪುರುಷರಿಗಿಂತ 12,322 ಮಹಿಳಾ ಮತದಾರರೇ ಹೆಚ್ಚಾಗಿ ಮತದಾನ ಮಾಡಿದ್ದಾರೆ.
ಒಟ್ಟು 20,92,222 ಮತದಾರರು ಇದ್ದು, ಇದರಲ್ಲಿ 10,26,324 ಪುರುಷ, 10,65,714 ಮಹಿಳಾ ಮತದಾರರು ಇದ್ದರು. ಇವರಲ್ಲಿ ಒಟ್ಟು 14,77,571 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇದ್ದು, 3,48,764 ಮತದಾರರಲ್ಲಿ 2,55,987 ಮತದಾನವಾಗಿದೆ. ಎರಡನೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ನರಸಿಂಹರಾಜ ಕ್ಷೇತ್ರದಲ್ಲಿ 3,10,979 ಮತದಾರರು ಇದ್ದು, 2,03,839 ಮತ ಚಲಾವಣೆಗೊಂಡಿವೆ.
ಕೃಷ್ಣರಾಜ ಲಾಸ್ಟ್, ಪಿರಿಯಾಪಟ್ಟಣ ಫಸ್ಟ್:
ಲೋಕಸಭಾ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಮತದಾನದಲ್ಲಿ ಶೇ.60.87ರಷ್ಟು ಮತದಾನ ಮಾಡಿ ಪಟ್ಟಿಯಲ್ಲಿ ಕೊನೆಯದಾಗಿದೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಶೇ.80.19ರಷ್ಟು ಮತದಾನವಾಗಿ ಮೊದಲ ಸ್ಥಾನದಲ್ಲಿದೆ.
ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಮತದಾನ ಪ್ರಮಾಣ ಕುಸಿತಗೊಂಡಿದೆ. ಕೃಷ್ಣರಾಜದಲ್ಲಿ ಶೇ.60.87ರಷ್ಟು ಮತದಾನ ಆಗಿದ್ದರೆ, ಚಾಮರಾಜ ಕ್ಷೇತ್ರದಲ್ಲಿ ಶೇ.60.98ರಷ್ಟು ಮತದಾನ ನಡೆದಿದೆ. ನರಸಿಂಹರಾಜ ಕ್ಷೇತ್ರದಲ್ಲಿ 65.55ರಷ್ಟು ಮತದಾನ ಆಗಿದೆ. ಈ ಚುನಾವಣೆಯಲ್ಲಿಯೂ ಗ್ರಾಮೀಣ ಪ್ರದೇಶದವರಿಗಿಂತ ನಗರ ಪ್ರದೇಶದ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರಿರುವುದು ಸಾಬೀತಾಗಿದೆ.
ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವ ಹುಣಸೂರು ಕ್ಷೇತ್ರದಲ್ಲಿ ಶೇ.77.91ರಷ್ಟು ಮತದಾನವಾಗಿ ಎರಡನೇ ಸ್ಥಾನದಲ್ಲಿದೆ. ಮಡಿಕೇರಿ ಶೇ.75.41ರಷ್ಟು ಮತದಾನವಾಗಿ ಮೂರನೇ, ವಿರಾಜಪೇಟೆ ಶೇ.73.88ರಷ್ಟು, ಚಾಮುಂಡೇಶ್ವರಿ ಶೇ.73.40ರಷ್ಟು ಮತದಾನವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net