

ಗದಗ: ನಗರದ ಪ್ರತಿಷ್ಠಿತ ಉನ್ನತಿ ಟ್ಯುಟೋರಿಯಲ್ ವತಿಯಿಂದ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತಮಟ್ಟದ ಫಲಿತಾಂಶ ಪಡೆದು ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನಗರದ ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಹಾಗೂ ಸೈಬರ್ ಕ್ರೈಂ ಅಧಿಕಾರಿಗಳಾದ ಶ್ರೀ ನಾಮದೇವ ಬಸವರಾಜ ಪಾಸ್ತೆ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಉನ್ನತಿ ಟುಟೋರಿಯಲ್ ಗದಗ ನಗರದ ಪ್ರತಿಷ್ಠಿತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕೋಚಿಂಗ್ ಕೇಂದ್ರವಾಗಿದೆ. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಈ ಟ್ಯುಟೋರಿಯಲ್ ನಲ್ಲಿ ಕೋಚಿಂಗ್ ತೆಗೆದುಕೊಂಡು ಉತ್ತಮ ದರ್ಜೆಯ ಅಂಕ ಪಡೆದು ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ರ್ಯಾಂಕ್ ಗಳಿಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಿಲೆಬಸ್ ಜೊತೆಗೆ ಶಿಸ್ತು, ನಡತೆ, ವ್ಯವಸ್ಥಿತ ಓದುವ ಕ್ರಮ, ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆಯ ಜ್ಞಾನದ ಧಾರೆಯನ್ನು ಎರೆಯುತ್ತಿದ್ದಾರೆ. ಉನ್ನತಿ ಟ್ಯುಟೋರಿಯಲ್ ಸಂಸ್ಥಾಪಕ /ಶಿಕ್ಷಕಿರಾದ ಶ್ರೀಮತಿ ರಶ್ಮಿ ಜನ್ನಾ ಹಾಗೂ ಶ್ರೀಮತಿ ವೀಣಾ ಬಾಳಿಹಳ್ಳಿಮಠ ರವರು ಶ್ರದ್ಧಾಸಕ್ತಿಯಿಂದ ಸಂಸ್ಥೆಯನ್ನು ಹುಟ್ಟು ಹಾಕಿ ಗ್ರಾಮೀಣ ಬಡಮಕ್ಕಳಿಗೆ ಹಾಗೂ ಕಲಿಕೆಯ ಹಿಂದುಳಿದ ಮಕ್ಕಳಿಗೆ ಸುವ್ಯವಸ್ಥಿತವಾದ ಜ್ಞಾನವನ್ನು ಒದಗಿಸಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಕೋಚಿಂಗ್ ತೆಗೆದುಕೊಂಡು ರ‍್ಯಾಂಕ್ ಗಳಿಸಿ ಜೊತೆಗೆ ಉತ್ತಮ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷದಿಂದ ಎಸ್ ಎಸ್ ಎಲ್ ಸಿ ಸಿಲೆಬಸ್ ಜೊತೆಗೆ ಕಬ್ಬಿಣದ ಕಡಲೆ ಎನಿಸಿದ ಇಂಗ್ಲಿಷ್ ವಿಷಯವನ್ನು ಎಲ್ಲಾ ಮಕ್ಕಳು ಸರಾಗವಾಗಿ ಮಾತಾಡಲು, ಓದಲು ಮತ್ತು ಬರೆಯಲು ಬರುವಂತೆ ಇಂಗ್ಲಿಷ್ ಗ್ರಾಮರ್ ಕ್ಲಾಸಸ್ ಪ್ರಾರಂಭ ಮಾಡುತ್ತಿದ್ದಾರೆ ಇದು ಮೆಚ್ಚುಗೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಒಂದಿದ್ದರೆ ಮಾತ್ರ ಜೀವನ ಪರಿಪೂರ್ಣ ಅಲ್ಲ, ಜೊತೆಗೆ ಉತ್ತಮ ವ್ಯಕ್ತಿತ್ವ ಬೇಕು, ಅಂಕದ ಜೊತೆಗೆ ವಿನಯವೂ ಬೇಕು. ನಾವು ದಿನನಿತ್ಯ ಕಲಿಯುತ್ತಲೇ ಇರಬೇಕು ಅದಕ್ಕಾಗಿ ಕಣ್ಣು, ಕಿವಿ ತೆರೆದಿಡಬೇಕು. ನಾವು ಯಾರಿಂದಲೂ ಕಲಿಯಲು ಇಲ್ಲ ಎನ್ನುವ ಮನಸ್ಥಿತಿ ಇರಬಾರದು ಎಂದ ಅವರು ನಾವು ಉತ್ತಮ ಮನುಷ್ಯ ಎಂದೆನಿಸಿಕೊಳ್ಳುವುದು ಬಹುದೊಡ್ಡ ಕಾರ್ಯ, ಅಂತಹ ಕಾರ್ಯ ಈ ಟ್ಯುಟೋರಿಯಲ್ ನಲ್ಲಿ ಕೋಚಿಂಗ್ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತಲಿದೆ ಎಂದರು.
ಈ ಸಂದರ್ಭದಲ್ಲಿ ಟ್ಯುಟೋರಿಯಲ್ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲು ಸೈಬರ್ ಕ್ರೈಂ ಅಧಿಕಾರಿಗಳಾದ ನಾಮದೇವ್ ಬಸವರಾಜ ಪಾಸ್ತೇ ರವರು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಸೈಬರ್ ನಲ್ಲಿ ಆಗುತ್ತಿರುವ ಅಪರಾಧಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಿ ಮಕ್ಕಳು ಅತಿ ಹೆಚ್ಚು ಮೊಬೈಲಿಗೆ ವ್ಯಸನರಾಗದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾಗವಹಿಸದಂತೆ ಎಚ್ಚರವಹಿಸಬೇಕು. ಇತ್ತೀಚಿಗೆ ಛಾಯಾಚಿತ್ರಗಳನ್ನು ಎಡಿಟಿಂಗ್ ಮಾಡಿ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ, ಇಂತಹ ಸಮಸ್ಯೆಗಳು ಎದುರಾದಾಗ ಹಾಗೂ ದೂರು ಕೊಟ್ಟಾಗ ಅವರ ಹತ್ತಿರದವರೇ ಮೋಸ ಮಾಡಿದ್ದಾರೆಂದು ತಿಳಿದು ಬರುತ್ತದೆ. ಯಾವುದೇ ಅಪರಿಚಿತ ಫೋನ್ ಕರೆ ಬಂದಾಗ ಓಟಿಪಿ ಕಳಿಸಿ ಕ್ಲಿಕ್ ಮಾಡಿ ಎಂದು ತಿಳಿಸಿ ಅಮಾಯಕರ ಹಣವನ್ನು ದೋಚಿತ್ತಿದ್ದಾರೆ, ಆದಷ್ಟು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಹಾಗೂ ನಿಮಗೂ ಮತ್ತು ನಿಮ್ಮ ಸುತ್ತಮುತ್ತಲಿನ ಯಾರಿಗಾದರೂ ಈ ರೀತಿ ಸಮಸ್ಯೆಗಳು ಉಂಟಾದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಟ್ಯುಟೋರಿಯಲ್ ಸಂಸ್ಥಾಪಕ /ಶಿಕ್ಷಕಿ ರಶ್ಮಿ ಜನ್ನಾ ರವರು ಹಾಗೂ ಶ್ರೀಮತಿ ವೀಣಾ ಬಾಳಿಹಳ್ಳಿಮಠ ರವರು ಟ್ಯುಟೋರಿಯಲ್ ಬೆಳೆದ ಬಂದ ಹಿನ್ನೆಲೆ ಹಾಗೂ ಸಾಧನೆ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಂತರ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಫಲಿತಾಂಶ, ಓದಿನ ಗುಟ್ಟು ಹಾಗೂ ಶಿಕ್ಷಕರ ಮಾರ್ಗದರ್ಶನದ ಕುರಿತು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕು. ಕುಬೇರ ಸೂಡಿ ಹಾಗೂ ಚೇತನ್ ಆಲೂರ ರವರು ಉತ್ತಮ ಅಂಕ ಗಳಿಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಕು. ರೇವತಿ ಉತ್ತರಕರ್ 98.42%, ಕು. ವಿನುತಾ ಕಬ್ಬಿನ 96.80%, ಕು. ಸವಿತಾ ಹಳ್ಳಿ 94%, ಕು. ತಯ್ಯಾಬ ಖಾಜಿ 90%, ಕು. ಸ್ನೇಹಾ ರುದ್ರಾಪುರಮಠ 88.20% ಹಾಗೂ ಕು. ನೇತ್ರಾ ಹಿರೇಮಠ 87% ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ ಪ್ರತಿವರ್ಷದಂತೆ ರ್ಯಾಂಕ್ ಪಡೆದ ಮೇಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯುಟೋರಿಯಲ್ ವತಿಯಿಂದ ನಗದು ಬಹುಮಾನವನ್ನು ವಿತರಿಸಲಾಯಿತು. ಇದೆ ವೇಳೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಗರದ ಪ್ರತಿಷ್ಠಿತ ಸಂಕನೂರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಕೊಡಮಾಡಲ್ಪಟ್ಟ ನಗದು ಬಹುಮಾನವನ್ನು ವಿತರಿಸಲಾಯಿತು.
ಶ್ರೇಯಾ ಚವಡಿ ಹಾಗೂ ಅನುಷಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಾದ ಕು. ಜಿಯಾ ಹಾಗೂ ಕು. ವೈಷ್ಣವಿ ರವರು ಅತಿಥಿಮಹನೀಯರ ಪರಿಚಯವನ್ನು ಪರಿಚಯಿಸಿದರು. ಕು. ಶ್ರೇಯ ಚವಡಿ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು, ಕು. ಪ್ರೀತಮ್ ಪಟ್ಟೆದ ರವರು ವಂದಿಸಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ ಹುಯಿಲಗೋಳ, ಶ್ರೀ ನಾಮದೇವ್ ಬಸವರಾಜ ಪಾಸ್ತೆ, ಶ್ರೀಮತಿ ರಶ್ಮಿ ಜನ್ನಾ , ಶ್ರೀಮತಿ ವೀಣಾ ಬಾಳಿಹಳ್ಳಿಮಠ, ಸಂಸ್ಥೆಯ ಸಿಬ್ಬಂದಿ ವರ್ಗದವರು, ರ್ಯಾಂಕ್ ಪಡೆದ ಸನ್ಮಾನಿತ ವಿದ್ಯಾರ್ಥಿಗಳು ಪಾಲಕರು ಹಾಗೂ ಟ್ಯುಟೋರಿಯಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.