

ಅಳವಂಡಿ: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಡಿಡಿಪಿಐ ಜಿ.ಎಚ್.ಜಗದೀಶ ಹೇಳಿದರು.
ಸಮೀಪದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ನಾವೆಲ್ಲರೂ ಸೇರಿ ರಾಜ್ಯ ಮಟ್ಟದಲ್ಲಿ ಕೊಪ್ಪಳ ಜಿಲ್ಲೆಯನ್ನು 10 ಸ್ಥಾನಕ್ಕಿಂತ ಕೆಳಗೆ ಬರುವಂತೆ ಮಾಡಬೇಕು. ಎಲ್ಲರೂ ಒಗ್ಗೂಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಕಾಲೇಜಿಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ ಹಾಗೂ ಇತರ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಮಾತನಾಡಿ, ಕಾಲೇಜು ಪ್ರಗತಿ ಹೊಂದಬೇಕಾದರೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು. ಮಹಾವಿದ್ಯಾಲಯಕ್ಕೆ ಕೊಠಡಿ, ಶೌಚಗೃಹ, ಕುಡಿವ ನೀರಿನ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದರು.
ಡಿಡಿಪಿಐ ಜಿ.ಎಚ್.ಜಗದೀಶ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ರಾಜಶೇಖರ ಪಾಟೀಲ್, ಕಾಲೇಜ ಅಭಿವೃದ್ದಿ ಸಮಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಮೈನಹಳ್ಳಿ, ಉಪನ್ಯಾಸಕರಾದ ವೀರಣ್ಣ ಜೋಗಿನ, ಐ.ಎನ್.ಪಾಟೀಲ, ವೀರಶೇಖರ ಪತ್ತಾರ, ಉಮಾಕಾಂತರಾವ್, ಜಯಪಾಲರಡ್ಡಿ, ಅನಿತಾ ಧಲಬಂಜನ್, ಗುಜ್ಜಲ ಆಂಜನೇಯ, ಸಂಗೀತಾ ಬೀಳಗಿಮಠ ಇತರರಿದ್ದರು.