ದೀನರ ಸೇವೆಯೇ ರಾಮನಿಗೆ ಸಲ್ಲುವ ಗೌರವ: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿ

12
Published on

ಮೈಸೂರು: ದೀನ-ದುಃಖಿತರ ಸೇವೆ ಮಾಡುವುದೇ ನಿಜವಾಗಿ ರಾಮನಿಗೆ ಸಲ್ಲುವ ಸೇವೆ ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯಿಂದ ಸೋಮವಾರ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಂದಿರದಲ್ಲಿ ಕೇವಲ ರಾಮನನ್ನು ಕೂರಿಸಿ ಪೂಜಿಸಿದರೆ ಸಾಲದು. ಸಮಾಜದಲ್ಲಿರುವ ದೀನ-ದುಃಖಿತರ ಸೇವೆ ಮಾಡಬೇಕು. ಇದೇ ನಿಜವಾಗಿ ಶ್ರೀರಾಮನಿಗೆ ಸಲ್ಲುವ ಸನ್ಮಾನ, ಗೌರವ. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠೆ ಆಯಿತು ಎಂದು ಸಂಭ್ರಮಿಸಬಾರದು. ನಮ್ಮ ಜವಾಬ್ದಾರಿ ಈಗ ಹೆಚ್ಚಾಗಿದ್ದು, ಮಂದಿರವನ್ನು ಮಂದಿರವನ್ನಾಗಿ ಉಳಿಸಿಕೊಳ್ಳಬೇಕಿದೆ. ನಮ್ಮ ಮುಂದಿನ ಸಂತತಿಯಲ್ಲಿ ಶ್ರೀರಾಮನ ಭಕ್ತಿ-ಭಾವ ಉಳಿಯಬೇಕಿದೆ ಆಶಿಸಿದರು.
ಈಗ ಮಾಡುತ್ತಿರುವ ಅಭಿನಂದನೆ ನಮಗೆ ಸಲ್ಲುವುದಕ್ಕಿಂತ ಶ್ರೀರಾಮನಿಗೆ ಸಲ್ಲುವ ಸನ್ಮಾನವಾಗಿದೆ. ಅಲ್ಲದೆ ಈ ಶ್ರಮದ ಹಿಂದೆ ಪೂಜ್ಯ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಶ್ರಮವೇ ಹೆಚ್ಚಿದೆ. ಈ ಗೌರವ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗೀರಾಜ್ ಹಾಗೂ ಅಯೋಧ್ಯೆಯಲ್ಲಿ ರಾಮದೇವರ ಸನ್ನಿಧಾನದಲ್ಲಿ ಸುಧಾಮಂಗಳ ಮಾಡಿದಂತಹ ಯುವ ವಿದ್ವಾಂಸರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮುಖಂಡರಾದ ಜಯಂರಾಂ ಭಟ್, ಎಸ್.ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net