ವಿಶೇಷ ಮಕ್ಕಳು ದೇವರಿಗೆ ಸಮಾನ : ಎಂಎಲ್‌ಸಿ ಸಿ.ಎನ್. ಮಂಜೇಗೌಡ

Manjegowda
Published on

ಮೈಸೂರು: ವಿಶೇಷ ಮಕ್ಕಳು ದೇವರಿಗೆ ಸಮಾನರಾಗಿದ್ದು, ಸರ್ಕಾರ ವಿಶೇಷ ಮಕ್ಕಳ ಶಾಲೆಗಳನ್ನು ಗುರುತಿಸಿ ಹೆಚ್ಚು ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸರ್ಕಾರವನ್ನು ಒತ್ತಾಯಿಸಿದರು.

ಶ್ರೀರಾಂಪುರದ ಕಂದಾಯ ಬಡಾವಣೆಯಲ್ಲಿರುವ ನವಚೇತನ ಬಸವೇಶ್ವರ ಟ್ರಸ್ಟ್‌ನ ವಿಶೇಷ ಚೇತನರ ಶಾಲೆಗೆ ಶನಿವಾರ ಭೇಟಿ ನಿಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈ ಶಾಲೆಗೆ ಡಿ.ಸಾಲುಂಡಿ, ದೊಡ್ಡಹುಂಡಿ, ಉದ್ಬೂರು, ಮುರುಡಗಳ್ಳಿ, ದೂರ, ಧನಗಳ್ಳಿಗಳಿಂದ ವಿಶೇಷ ಮಕ್ಕಳನ್ನು ಕರೆದುಕೊಂಡು ಬಂದು ಮಾಕಿ ಮರಿಗೌಡರು ಆರೈಕೆ ಮಾಡುತ್ತಿದ್ದಾರೆ. ವಿಶೇಷ ಮಕ್ಕಳ ನಡವಳಿಕೆ, ಸ್ವಾಭಾವಿಕವಾಗಿ ಇರುವುದಿಲ್ಲ. ಈ ಮಕ್ಕಳು ಹೆತ್ತವರಿಗೆ ಭಾರ ಅನಿಸುತ್ತದೆ. ಆದರೆ ಮಾಕಿ ಮರೀಗೌಡರು ಈ ಕೆಲಸವನ್ನು ಭಾಗ್ಯ ಎಂದುಕೊಂಡು ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವಿಶೇಷ ಮಕ್ಕಳ ಶಾಲೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ನನ್ನ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಪ್ರತಿವರ್ಷ 1 ಲಕ್ಷ ರೂ.ಅನ್ನು ಸಂಸ್ಥೆಗೆ ನೀಡಲಾಗುವುದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಕೊಡಿಸುವ ಜತೆಗೆ ನಿವೇಶನದ ಸಂಪೂರ್ಣ ಹಣವನ್ನು ನಾನೇ ಭರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಾಕಿ ಮರಿಗೌಡ, ಸ್ಥಳೀಯ ಪ್ರಮುಖರಾದ ದಿನೇಶ್‌ಗೌಡ, ಧನಗಳ್ಳಿ ಬಸವರಾಜು, ರಮೇಶ್, ಶಿಕ್ಷಕರಾದ ಸನ್ಮತಿ, ಅಶ್ವಿನಿ, ತೇಜಸ್ವಿನಿ, ಮಂಜುಳ, ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net