ಪ್ರಥಮ ಪಿಯುಸಿ ಪ್ರವೇಶಾತಿ ದಂಧೆ ತಡೆಯುವಂತೆ ಒತ್ತಾಯಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎಂ.ಜೆ.ಸುರೇಶ್‌ಗೌಡ

Published on

ಮೈಸೂರು: ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೂ ಮೊದಲೇ ಪ್ರಥಮ ಪಿಯುಸಿ ಪ್ರವೇಶಾತಿ ಹೆಸರಿನಲ್ಲಿ ನಡೆಯುವ ದಂಧೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜೆ.ಸುರೇಶ್‌ಗೌಡ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕೆಲವು ವರ್ಷಗಳಿಂದ ಪ್ರತಿಷ್ಠಿತ ಕಾಲೇಜುಗಳ ಹೆಸರಿನಲ್ಲಿ ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಬರುವುದಕ್ಕೆ ಮೊದಲೇ ಪ್ರಥಮ ಪಿಯುಸಿ ದಾಖಲಾತಿ ಆರಂಭಗೊಳ್ಳುತ್ತಿದೆ. ದಾಖಲಾತಿ ಹೆಸರಿನಲ್ಲಿ ಪಾಲಕರಿಗೆ ದೂರವಾಣಿ ಸಂಪರ್ಕ ಮಾಡಿ ತಮ್ಮ ಶಾಲೆಗೆ ದಾಖಲಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೆ, ಆರ್ಥಿಕವಾಗಿಯೂ ಹೊರೆ ಅಗುವಂತೆ ಮಾಡುತ್ತಿದ್ದಾರೆ ಎಂದು ದೂರಿನದಲ್ಲಿ ಆರೋಪಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಒಂದು ವೇಳೆ ಪಾಲಕರು ಹಣ ಕೊಟ್ಟು ದಾಖಲು ಮಾಡಿಸಿದರೂ ಕಡಿಮೆ ಅಂಕ ಬಂದಿದೆ. ಹಾಗಾಗಿ ಇನ್ನು ಹೆಚ್ಚಿನ ಹಣ ಪಾವತಿಸಬೇಕು ಎಂದು ಒತ್ತಾಯಿಸುತ್ತಾರೆ. ವಿದ್ಯಾರ್ಥಿ ಅನುತ್ತೀರ್ಣನಾದರೆ ಮುಂದೆ ಪರೀಕ್ಷೆ ಬರೆದು ಉತ್ತೀರ್ಣನಾದಾಗ ನಮ್ಮ ಸಂಸ್ಥೆಗೆ ಸೇರಿಸಿ ಎನ್ನುವ ಉತ್ತರ ನೀಡಿ ಹಣ ವಾಪಸ್ ನೀಡುತ್ತಿಲ್ಲ. ಆದ್ದರಿಂದ ಇಂತಹ ದಂಧೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಬಳಿಕ ಪ್ರಥಮ ಪಿಯು ದಾಖಲೆಗೆ ಅಧಿಸೂಚನೆ ಹೊರಡಿಸಿ ವೇಳಾಪಟ್ಟಿ ನಿಗದಿಪಡಿಸಬೇಕು. ಆಗ ಮಾತ್ರ ದಾಖಲಾತಿ ಮಾಡಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಬೇಕು. ದಾಖಲೆ ಮಾಡಿಕೊಂಡಿರುವುದಕ್ಕೆ ಸಂಪೂರ್ಣ ಹಣಕ್ಕೆ ರಸೀದಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net