

ಕುಶಾಲನಗರ
ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ 2024-25ನೇ ಶೈಕ್ಷಣಿಕ ಸಾಲಿನ ಬಿ.ಎ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್‌ನ ಆವರ್ತನ ಮತ್ತು ಪುನರಾವರ್ತನ ಪರೀಕ್ಷೆಗಳು ಮುಗಿದ ಒಂದೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ಪ್ರಕಟಿಸಿದ ಕೀರ್ತಿಗೆ ಕೊಡಗು ವಿಶ್ವವಿದ್ಯಾಲಯ ಭಾಜನವಾಗಿದೆ.
ಸ್ನಾತಕ ಪದವಿ ಪರೀಕ್ಷೆಗಳು ಮುಗಿದ 20 ದಿನಗಳೊಳಗೆ ಫಲಿತಾಂಶ ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶನದಂತೆ ಕೇವಲ ಒಂದು ವಾರದಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಈ ಹಿಂದೆಯೂ ಕೊಡಗು ವಿವಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಕೊಡಗಿನ 22 ಕಾಲೇಜುಗಳ ಸುಮಾರು 4000 ವಿದ್ಯಾರ್ಥಿಗಳು ಹಾಜರಾಗಿದ್ದರು.
ಕೊಡಗು ವಿಶ್ವವಿದ್ಯಾಲಯದ ಸ್ನಾತಕ ವಿದ್ಯಾರ್ಥಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿಕೊಂಡು, ಜಿಲ್ಲೆಯ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUMS) ಮೂಲಕ ಯಶಸ್ವಿಯಾಗಿ ನಡೆಸಲಾಗಿದ್ದು, ಸ್ನಾತಕ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು UUCMS ಅಥವಾ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ KUK.Karnataka.gov.in ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಬಹುದಾಗಿದೆ.
ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಆನ್ಲೈನ್ ತಂತ್ರಾಂಶದಲ್ಲಿ ಪ್ರಕಟಿಸಿದರು.
ಇದೇ ಸಂದರ್ಭ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಎಂ. ಸುರೇಶ್ , ಕೊಡಗು ವಿವಿ ಪರೀಕ್ಷಾಂಗ ವಿಶೇಷಾಧಿಕಾರಿ ಪ್ರೊ. ಎಂ.ಎನ್. ರವಿಶಂಕರ್ ನೋಡಲ್ ಅಧಿಕಾರಿ ಗಗನ್ ಇದ್ದರು.