ಕೊಡಗು ವಿವಿ ಪರೀಕ್ಷೆಗಳ ಫಲಿತಾಂಶ ಪ್ರಕಟ

result
Published on

ಕುಶಾಲನಗರ:

ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ 2024-25ನೇ ಶೈಕ್ಷಣಿಕ ಸಾಲಿನ ಬಿ.ಎ., ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ಪದವಿಗಳ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ (ಆವರ್ತನ ಮತ್ತು ಪುನರಾವರ್ತನ) ಪರೀಕ್ಷೆಗಳು ಮುಗಿದ ಹನ್ನೆರಡು ದಿನಗಳಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಿದ ಕೀರ್ತಿಗೆ ಕೊಡಗು ವಿಶ್ವವಿದ್ಯಾಲಯ ಪಾತ್ರವಾಗಿದೆ.

ಕರ್ನಾಟಕ ಸರ್ಕಾರದ ರಾಜ್ಯ ಶಿಕ್ಷಣ ನೀತಿ-2024ರ ಅಡಿಯಲ್ಲಿ ಕೊಡಗು ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿವಿಧ ಸ್ನಾತಕ ಪದವಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ ಪ್ರಥಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆಗೂ ಕೊಡಗು ವಿಶ್ವವಿದ್ಯಾಲಯವು ಪಾತ್ರವಾಗಿದೆ. ಈ ಹಿಂದೆಯೂ ಕೂಡ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾದ ಪ್ರಥಮ ವರ್ಷದಲ್ಲಿ ಪ್ರಥಮ ಸೆಮಿಸ್ಟರ್‌ನ ಸ್ನಾತಕ ಪದವಿ ಪರೀಕ್ಷೆಗಳು ಮುಗಿದ 20 ದಿನಗಳೊಳಗೆ ಫಲಿತಾಂಶ ಪ್ರಕಟಿಸಬೇಕು ಎಂಬ ಯುಜಿಸಿ ನಿರ್ದೇಶನದಂತೆ ಕೇವಲ ಒಂದು ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೇ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆದ ಪರೀಕ್ಷೆಗೆ ಕೊಡಗಿನ 22 ಕಾಲೇಜುಗಳ ಸುಮಾರು 4 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊಡಗು ವಿಶ್ವವಿದ್ಯಾಲಯದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿಕೊಂಡು, ಜಿಲ್ಲೆಯ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬAಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಯಶಸ್ವಿಯಾಗಿ ನಡೆಸಲಾಗಿದ್ದು, ಸ್ನಾತಕ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್   ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ.

ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಆನ್ಲೈನ್ ತಂತ್ರಾAಶದಲ್ಲಿ ಪ್ರಕಟಿಸಿದರು. ಇದೇ ಸಂದರ್ಭ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಎಂ. ಸುರೇಶ್, ಕೊಡಗು ವಿವಿ ಪರೀಕ್ಷಾಂಗದ ವಿಶೇಷಾಧಿಕಾರಿ ಪ್ರೊ. ಎಂ.ಎನ್. ರವಿಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net