

ವಿರಾಜಪೇಟೆ: ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ಸವಕ್ಕೆ ಡಿಜೆ ಬಳಸುವಂತಿಲ್ಲ ಎಂದು ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಮೋಹನ್ ಕುಮಾರ್ ಹೇಳಿದರು.
ಐತಿಹಾಸಿಕ ಗೌರಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ನಗರ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ನಗರ ಮತ್ತು ಗ್ರಾಮಾಂತರ ಪ್ರದೇಶದ ಉತ್ಸವ ಸಮಿತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯಾಯಾಲಯದ ಆದೇಶದಂತೆ ಶಬ್ದ ಮಾಲಿನ್ಯ ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಸತಿ ಪ್ರದೇಶ, ಕೈಗಾರಿಕಾ ಬಡಾವಣೆಗಳು, ವಾಣಿಜ್ಯ ಪ್ರದೇಶ, ನಿಶ್ಯಬ್ದ ಪ್ರದೇಶ ಎಂದು ವಿಂಗಡಿಸಲಾಗಿದ್ದು, ಇಂತಹ ಸ್ಥಳಗಳಲ್ಲಿ ಶಬ್ದ ಮಿತಿ ನಿಗದಿಗೊಳಿಸಲಾಗಿದೆ. ನಿಗದಿತ ಮಿತಿಯನ್ನು ಮೀರಿ ಶಬ್ದ ಪ್ರಯೋಗವಾದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಮಿತಿಗಳಿಗೆ ಎಚ್ಚರಿಕೆ ನೀಡಿದರು.
ಪಾಶ್ಚಾತ್ಯ ಸಂಗೀತವನ್ನು ಬದಿಗೊತ್ತಿ ದೇಶದ ಸಂಸ್ಕೃತಿಗಳನ್ನು ಬಿಂಬಿಸುವ ಸಂಗೀತ ನೃತ್ಯ, ವಾದ್ಯಗಳಿಗೆ ಒತ್ತು ನೀಡಬೇಕು. ಅಲ್ಲದೆ ಪರಿಸರ ಕಾಳಜಿಗಾಗಿ ಮಣ್ಣಿನಿಂದ ತಯಾರಿಸಿದ ಉತ್ಸವ ಮೂರ್ತಿಗಳನ್ನು ಬಳಸಿ ಎಂದು ಉತ್ಸವ ಸಮಿತಿಗಳಿಗೆ ಮನವಿ ಮಾಡಿದರು.
ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರಪ್ಪ ಮಾತನಾಡಿದರು. ಸಭೆಯಲ್ಲಿ ನಗರ ಠಾಣಾಧಿಕಾರಿಗಳಾದ ಎಚ್.ಎನ್.ಪ್ರಮೋದ್, ಅಪರಾಧ ವಿಭಾಗದ ಠಾಣಾಧಿಕಾರಿಗಳಾದ ಬಿ.ಎಸ್.ವಾಣಿಶ್ರೀ, ಗ್ರಾಮಾಂತರ ಠಾಣಾಧಿಕಾರಿ ಸಿ.ಸಿ.ಮಂಜುನಾಥ್ ಇದ್ದರು.