ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ!

shivagange
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನೂತನ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವ ಸಂಬಂಧ ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಲಿದೆ.!

ವರ್ಷಾಚರಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸುವುದರ ಜತೆಗೆ ಮೋಜು ಮಸ್ತಿ ನೆಪದಲ್ಲಿ ಅಹಿತರ ಘಟನೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಕೆಲವೊಂದು ಮಾರ್ಗಸೂಚಿ ಸಿದ್ದಪಡಿಸುತ್ತಿದೆ. ಕಳೆದ ನಾಲ್ಕೈದು ವರ್ಷಗಳ ಕಹಿಘಟನೆಗಳ ವರದಿ ಪಡೆದಿರುವ ಜಿಲ್ಲಾಡಳಿತ ಇಂಥ ಘಟನೆಗಳು ಮರುಕಳಿಸಬಾರದೆಂಬ ಕಾರಣಕ್ಕೆ ಶಿಸ್ತುಕ್ರಮಕ್ಕೆ ಮುಂದಾಗಲಿದೆ.

ಚಾರಣಕ್ಕೆ ಅವಕಾಶವಿಲ್ಲ:

ಹೊಸ ವರ್ಷಾಚರಣೆ-2025 ರ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಾದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ಮಾಕಳಿದುರ್ಗ, ಆವತಿ ಬೆಟ್ಟ ಬೆಟ್ಟದ ತಪ್ಪಲು ಪ್ರದೇಶಗಳಿಗೆ 2024 ರ ಡಿ.31ರ ಸಂಜೆ 6 ಗಂಟೆಯಿಂದ 2025 ರ ಜ.1 ರ ಮಧ್ಯರಾತ್ರಿ 12 ಗಂಟೆವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ. ಪರಿಸ್ಥಿತಿ ಅವಲೋಕಿಸಿ ಇದನ್ನು ವಿಸ್ತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಅವಧಿ ವಿಸ್ತರಣೆ ಇಲ್ಲ:

ಜಿಲ್ಲೆಯಲ್ಲಿನ ಎಲ್ಲ ಮದ್ಯದಂಗಡಿಗಳು ಹಾಗೂ ರೆಸಾರ್ಟ್, ಹೋಂಸ್ಟೇಗಳಂಥ ಪ್ರದೇಶಗಳಲ್ಲಿ ವರ್ಷಾಚರಣೆಗೆ ಯಾವುದೇ ರೀತಿ ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ಎಂದಿನ ದಿನಗಳಂತೆ ಯಥಾಸ್ಥಿತಿಯಲ್ಲಿ ಅವುಗಳು ಕಾರ್ಯನಿರ್ವಹಿಸಬೇಕು. ಎಂದಿನ ಕಾಲಾವಧಿಯಲ್ಲಿ ಅವುಗಳನ್ನು ಬಂದ್ ಮಾಡಬೇಕು, ಎಲ್ಲಿಯಾದರೂ ನಿಯಮ ಮೀರಿ ಕಾರ್ಯಚಟುವಟಿಕೆ ನಡೆಯುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸುವ ಸಂಬಂಧ ಜಿಲ್ಲಾಡಳಿತ ಸೂಚನೆ ಹೊರಡಿಸಲಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು:

ಹೊಸ ವರ್ಷಾಚರಣೆ ನೆಪದಲ್ಲಿ ಪ್ರತಿ ವರ್ಷ ಬೆಟ್ಟಗಳ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುವುದು ಸಾಮಾನ್ಯವಾಗಿದೆ. ಈ ಹಿಂದೆ ಶಿವಗಂಗೆ ಬೆಟ್ಟದಲ್ಲಿ ನೂಕುನುಗ್ಗಲು ಏರ್ಪಟ್ಟು ಕಾಲ್ತುಳಿತ ಪ್ರಕರಣ ವರದಿಯಾಗಿತ್ತು. ಅದಾದ ಬಳಿಯ ಅಂಥ ಯಾವುದೇ ಕಹಿಘಟನೆಗಳು ವರದಿಯಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬೆಟ್ಟಗಳ ಬಳಿ ಸಾರ್ವಜನಿಕರು ಜಮಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪೊಲೀಸರ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸುವುದು, ಬೆಟ್ಟಗಳಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸವಾರರನ್ನು ತಡೆದು ವಾಪಸ್ ಕಳುಹಿಸಲು ಪೊಲೀಸರಿಗೆ ಸೂಚನೆ ಹೊರಡಿಸಲಿದೆ.

ಬೈಕ್ ವ್ಹೀಲಿಂಗ್ ಬಗ್ಗೆ ನಿಗಾ:

ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವ ವಿರುದ್ಧ ಹದ್ದಿನ ಕಣ್ಣಿಡಲಿರುವ ಜಿಲ್ಲಾ ಪೊಲೀಸರು ಟೋಲ್‌ಗಳಲ್ಲಿ ತೀವ್ರ ತಪಾಸಣೆಗೆ ಮುಂದಾಗಲಿದ್ದಾರೆ. ಅಲ್ಲದೆ ಬೈಕ್ ರೇಸ್, ವ್ಹೀಲಿಂಗ್ ಕ್ರೇಜ್ ಹೆಸರಲಿನಲ್ಲಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟು ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾ ಪೊಲೀಸರು ಹೆಚ್ಚಿನ ನಿಗಾ ವಹಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವ ಮೂಲಕ ಅತಿ ವೇಗ ಚಾಲನೆಗೆ ಕಡಿವಾಣ ಹಾಕುವುದು ಸೇರಿ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸರು ಸಜ್ಜಾಗಿದ್ದಾರೆ.

ಪಾರ್ಟಿಗಳಿಗೆ ಅನುಮತಿ ಪತ್ರ ಬಂದಿಲ್ಲ:

ಇನ್ನು ಹೊಸ ವರ್ಷಾಚರಣೆ ಸಂಬಂಧ ವಿವಿಧ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಪಾರ್ಟಿ ಆಯೋಜಿಸುವ ಬಗ್ಗೆ ಇದುವರೆಗೆ ಜಿಲ್ಲಾ ಪೊಲೀಸರಿಗೆ ಯಾವುದೇ ಅನುಮತಿಪತ್ರ ಬಂದಿಲ್ಲ ಎನ್ನಲಾಗಿದ್ದು, ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳು ಸಭೆ ನಡೆಸಲಿದ್ದು, ಕೆಲವೊಂದು ಮಾರ್ಗಸೂಚಿ ರೂಪಿಸಲು ಸಿದ್ದತೆ ನಡೆಸಿದೆ. ಪಾರ್ಟಿ, ಮೋಜು-ಮಸ್ತಿ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸಿಗಳಿಗೆ ನಷ್ಟವುಂಟು ಮಾಡುವುದು, ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದು ಸೇರಿ ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ಮುಂಜಾಗ್ರತೆ ವಹಿಸುವ ಸಂಬಂಧ ಸಭೆ ನಡೆಯಲಿದೆ.

--------

ಕೋಟ್()

ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯುವುದು ಹಾಗೂ ಮೋಜು ಮಸ್ತಿ ಹೆಸರಿನಲ್ಲಿ ಅಪಘಡಗಳಿಗೆ ಆಹ್ವಾನ ನೀಡುವುದನ್ನು ನಿಯಂತ್ರಿಸುವ ಸಲುವಾಗಿ ಕೆಲವೊಂದು ಮಾರ್ಗಸೂಚಿ ಹೊರಡಿಸಲಾಗುವುದು, ಮುಖ್ಯವಾಗಿ ಜಿಲ್ಲೆಯಲ್ಲಿನ ಪ್ರವಾಸಿತಾಣಗಳಲ್ಲಿ ಅಂದಿನ ದಿನ ಸಾರ್ವಜನಿಕ ಪ್ರವೇಶ ನಿಷೇಧಿಸುವ ಚಿಂತನೆ ಇದೆ. ಜತೆಗೆ ಬೈಕ್ ವ್ಹೀಲಿಂಗ್ ಮತ್ತಿತರ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗುವುದು.

ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ

-------

ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಮುಖ್ಯವಾಗಿ ಹೆದ್ದಾರಿಗಳಲ್ಲಿ ವಾಹನ ಸವಾರರ ಮೇಲೆ ಕಣ್ಣಿಡಲಾಗುವುದು. ಹೊಸ ವರ್ಷಾಚರಣೆ ಸಂಬಂಧ ಜಿಲ್ಲಾಡಳಿತದಿಂದ ಪ್ರಸ್ತುತ ಯಾವುದೇ ಮಾರ್ಗಸೂಚಿ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಮಾರ್ಗಸೂಚಿಯನ್ನು ಅನುಸರಿಸಲಾಗುವುದು.

ಸಿ.ಕೆ.ಬಾಬಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net