ರಸ್ತೆ ಮೇಲೆ ಮೀನು ಮಾರಾಟಕ್ಕೆ ನಿರ್ಬಂಧ

15 rtl 01
Published on

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಕಿರಕಿರಿಯುಂಟಾಗುವಂತೆ ಪಟ್ಟಣದ ತುಮ್ಮಿನಕಟ್ಟೆ ಮತ್ತು ಕಾರಂಜಿ ವೃತ್ತದ ದ್ವಿಮುಖ ರಸ್ತೆಗೆ ಹೊಂದಿಕೊಂಡು ಮೀನು ಮಾರಾಟ ಮಾಡದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಆದೇಶದ ಮೇರೆಗೆ ಸಿಬ್ಬಂದಿ ಗುರುವಾರ ಎಚ್ಚರಿಸಿದರು.

ಪಟ್ಟಣದ ಪ್ರಮುಖ ರಸ್ತೆಗೆ ಹೊಂದಿಕೊಂಡು ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ಅನುಭವಿಸುತ್ತಿದ್ದ ಸಮಸ್ಯೆ ಕುರಿತು ‘ವಿಜಯವಾಣಿ’ಯಲ್ಲಿ ಅ. 14ರಂದು ‘ಮೀನು ಮಾರಾಟದಿಂದ ಸಂಚಾರಕ್ಕೆ ಕಿರಿಕಿರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸಿಬ್ಬಂದಿ ಮೂಲಕ ಮೀನು ಮಾರಾಟಗಾರರಿಗೆ ಎಚ್ಚರಿಕೆ ನೀಡಿ ಪರ್ಯಾಯ ಪ್ರದೇಶದಲ್ಲಿ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ, ‘ವಾಹನ ದಟ್ಟಣೆ ಪ್ರದೇಶದಲ್ಲಿ ಮೀನು ಮಾರಾಟ ಮಾಡಬೇಡಿ. ತುಮ್ಮಿನಕಟ್ಟೆ ರಸ್ತೆ ಬಳಿಯ ತೋಟಗಂಟಿ ರಸ್ತೆಯಲ್ಲಿ ಮೀನು ಮಾರಾಟ ಮಾಡಬಹುದು. ಸೂಚನೆ ಮೀರಿ ಇಲ್ಲೇ ಮೀನು ಮಾರಾಟ ಮಾಡಿದರೆ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಸಿದರು.

‘ಶನಿವಾರದಿಂದ ಇಲ್ಲಿ ಯಾರೂ ಮೀನು ಮಾರಾಟ ಮಾಡುವುದಿಲ್ಲ’ ಎಂದು ಮಾರಾಟಗಾರರು ಸಹಮತ ಸೂಚಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜರಾಂ ಪವಾರ ಸೂಚನೆ ಮೇರೆಗೆ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಮಂಜುನಾಥ ಸುಣಗಾರ, ಸಂತೋಷ ಬಿಳಚಿ ಸ್ಥಳಕ್ಕೆ ಭೇಟಿ ನೀಡಿದ್ದರು.

ರಸ್ತೆಯಲ್ಲಿ ಮೀನು ಮಾರಾಟ ಮಾಡುವುದರಿಂದ ಸುಗಮ ಸಂಚಾರಕ್ಕೆ ಆಗುತ್ತಿದ್ದ ತೊಂದರೆ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಗಮನಿಸಿ ಮುಖ್ಯಾಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗಿದೆ. ಗುರುತಿಸಿದ ಜಾಗ ಬಿಟ್ಟು ರಸ್ತೆ ಮೇಲೆಯೇ ಮೀನು ಮಾರಾಟ ಮುಂದುವರಿದರೆ ಪೊಲೀಸ್ ಸಿಬ್ಬಂದಿ ಸಮೇತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ.| ಕೆ. ಗುರುಬಸವರಾಜ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net