ಅಪಾರ್ಟ್​ವೆುಂಟ್​ಗಳಲ್ಲಿ ನಿರ್ಬಂಧ

apartment 29 mar 20
Published on

ಬೆಂಗಳೂರು: ಮಹಾನಗರದಲ್ಲಿ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್​ಡೌನ್ ಆಗಿರುವುದರಿಂದ ಅಪಾರ್ಟ್​ವೆುಂಟ್​ಗಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅದಕ್ಕೆ ನಿವಾಸಿಗಳ ಸಂಘಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ.

ವಿದೇಶಗಳಿಂದ ಭಾರತಕ್ಕೆ ವಾಪಸಾದವರಿಂದಲೇ ಕರೊನಾ ಭಾರತಕ್ಕೆ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿರುವ 14 ಸಾವಿರಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸರ್ಕಾರ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಿದ್ದು, ಬಹಳಷ್ಟು ಪ್ರಮಾಣದಲ್ಲಿ ಅಪಾರ್ಟ್​ವೆುಂಟ್ ವಿಳಾಸಗಳಿವೆ. ಹೊರದೇಶಗಳಿಗೆ ಆಗಾಗ್ಗೆ ಪ್ರಯಾಣ ಮಾಡುವವರು ತಮ್ಮ ಮನೆಯ ಹಾಗೂ ಕುಟುಂಬದವರ ಸುರಕ್ಷತೆಸಲುವಾಗಿ ವೈಯಕ್ತಿಕ ಮನೆಗಳಿಗಿಂತಲೂ ಅಪಾರ್ಟ್​ವೆುಂಟ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಪಾರ್ಟ್​ವೆುಂಟ್ ಮನೆಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಹೆಚ್ಚು ಪರಿಶ್ರಮ ವಹಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪಾರ್ಟ್​ವೆುಂಟ್​ಗಳ ಎಲ್ಲ ಈಜುಕೊಳಗಳನ್ನೂ ಮುಚ್ಚುವಂತೆ ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಕಳೆದ ವಾರವೇ ಸುತ್ತೋಲೆ ಹೊರಡಿಸಿದ್ದರು. ಬೆಂಗಳೂರಿನ ಬಹುತೇಕ ಆಪಾರ್ಟ್​ವೆುಂಟ್​ಗಳು ಈಜುಕೊಳದ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿವೆ.

ಈಜುಕೊಳದ ಜತೆಗೆ ಅಪಾರ್ಟ್​ವೆುಂಟ್​ಗಳಲ್ಲಿ ಹೆಚ್ಚು ಬಳಕೆಯಾಗುವುದು ಲಿಫ್ಟ್​ಗಳು. ಬೆಂಗಳೂರಿನ ಹಳೆಯ ಅಪಾರ್ಟ್​ವೆುಂಟ್​ಗಳು ಮೂರರಿಂದ ನಾಲ್ಕು ಅಂತಸ್ತಿದ್ದು, ಲಿಫ್ಟ್ ಇಲ್ಲದೆಯೂ ಕೆಲವೊಮ್ಮೆ ಜೀವನ ನಡೆಯುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ 15ಕ್ಕಿಂತ ಹೆಚ್ಚು ಅಂತಸ್ತಿನ ಅಪಾರ್ಟ್​ಮೆಂಟ್​ಗಳು ನಿರ್ವಣವಾಗುತ್ತಿದ್ದು, ಲಿಫ್ಟ್ ಬಳಕೆ ಅನಿವಾರ್ಯ. ಲಿಫ್ಟ್ ಗುಂಡಿಗಳನ್ನು ಪ್ರತಿದಿನ ಹತ್ತಾರು ಬಾರಿ ಅನೇಕರು ಒತ್ತುವ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ಲಿಫ್ಟ್ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಮಲ್ಲೇಶ್ವರದ ಅಪಾರ್ಟ್​ವೆುಂಟ್ ನಿವಾಸಿ ತಿಳಿಸಿದ್ದಾರೆ. ಲಿಫ್ಟ್​ಗಳನ್ನು ದಿನಕ್ಕೆ ಮೂರು ಬಾರಿ ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತದೆ. ಜತೆಗೆ ಗುಂಡಿಗಳನ್ನು ಒತ್ತುವ ಮುನ್ನ ಹಾಗೂ ಒತ್ತಿದ ನಂತರ ಕಡ್ಡಾಯವಾಗಿ ಬಳಸಲು ಸ್ಯಾನಿಟೈಸರ್ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಪಾರ್ಟ್​ವೆುಂಟ್​ಗಳಲ್ಲಿ ಕ್ವಾರಂಟೈನ್ ಆದ ಕುಟುಂಬಗಳ ಬೆಂಬಲಕ್ಕೆಂದೇ ವಾಟ್ಸ್​ಆಪ್ ಗ್ರೂಪ್​ಗಳನ್ನು ರಚಿಸಿಕೊಳ್ಳಲಾಗಿದೆ. ಕುಟುಂಬದವರಿಗೆ ಏಕತಾನತೆ ಕಾಡದಂತೆ ಉಳಿದನಿವಾಸಿಗಳು ಕುಶಲೋಪರಿ ನಡೆಸುತ್ತಿರುತ್ತಾರೆ. ಕುಟುಂಬಕ್ಕೆ ಅತ್ಯಗತ್ಯ ವಸ್ತುಗಳ ಪೂರೈಕೆ, ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೂ ಇದು ಸಹಕಾರಿಯಾಗಿದೆ ಎಂದು ಬೆಂಗಳೂರು ಅಪಾರ್ಟ್​ವೆುಂಟ್ಸ್ ಒಕ್ಕೂಟ ತಿಳಿಸಿದೆ.

ವಿಭಿನ್ನ ಚಟುವಟಿಕೆಗಳು

ಸಾಮಾಜಿಕ ಅಂತರ ಕಾಪಾಡುವಲ್ಲಿ ಹಾಗೂ ಬಡವರಿಗೆ ಆಹಾರ ವಿತರಣೆಯಲ್ಲೂ ಆಪಾರ್ಟ್​ವೆುಂಟ್ ನಿವಾಸಿಗಳು ತೊಡಗಿಸಿಕೊಂಡಿದ್ದಾರೆ. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ರುಸ್ತಂ ಬಾಘ್ ಅಪಾರ್ಟ್ ಮೆಂಟ್ ನಿವಾಸಿಗಳು, ಸುತ್ತಲಿನ ದಿನಸಿ ಅಂಗಡಿಗಳ ಸುತ್ತ ಸಾಮಾಜಿಕ ಅಂತರ ಗುರುತುಗಳನ್ನು ಬರೆದಿದ್ದಾರೆ. ಮನೆಯಲ್ಲೆ ಉಳಿದಿರುವ ಕಾರಣ ಮಕ್ಕಳ ಚಿಕಿತ್ಸೆ ಹಾಗೂ ಲಸಿಕೆಯಲ್ಲಿ ಕೆಲವು ತೊಂದರೆಗಳಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಬೇಗೂರಿನ ಎಸ್​ಎನ್​ಎನ್ ರಾಜ್ ಸೆರಿನಿಟಿ ಅಪಾರ್ಟ್​ವೆುಂಟ್​ನಲ್ಲಿ ವಾಸಿಸುವ ಮಕ್ಕಳ ವೈದ್ಯೆ ಡಾ. ಶೀತಲ್ ಆರೋಗ್ಯ ತಪಾಸಣೆ ನಡೆಸಿದರು. ಅಪಾರ್ಟ್​ಮೆಂಟ್​ನಲ್ಲಿರುವ ಮಕ್ಕಳ ತಪಾಸಣೆ ಜತೆಗೆ, ಕಾಲಕಾಲಕ್ಕೆ ನೀಡಬೇಕಿರುವ ಲಸಿಕೆಯನ್ನೂ ನೀಡುತ್ತಿದ್ದಾರೆ.

ಸಮಸ್ಯೆ ಹೆಚ್ಚಳ

ಲಾಕ್​ಡೌನ್ ಕಾರಣಕ್ಕೆ ಅನೇಕ ಅಪಾರ್ಟ್​ವೆುಂಟ್​ಗಳಲ್ಲಿ ಮನೆಗೆಲಸದವರ ಸಮಸ್ಯೆ ವಿಪರೀತವಾಗಿದೆ. ಮನೆ ಸ್ವಚ್ಛತೆ, ಮೆಟ್ಟಿಲುಗಳಂತಹ ಸರ್ವ ಬಳಕೆಯ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಮನೆಗೆಲಸದವರು ಬೆಂಗಳೂರು ಬಿಟ್ಟು ಊರುಗಳಿಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿರುವವರೂ ಕರೊನಾ ಭೀತಿ ಕಾರಣಕ್ಕೆ ಕೆಲಸಕ್ಕೆ ಬರುತ್ತಿಲ್ಲ, ಕೆಲಸದವರಿಗೆ ರಜೆ ನೀಡಿ ಎಂದು ಸರ್ಕಾರದಿಂದಲೂ ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಅಪಾರ್ಟ್ ಮೆಂಟ್​ಗಳ ಸರ್ವರ ಬಳಕೆ ಪ್ರದೇಶಗಳ ಸ್ವಚ್ಛತೆ ಕಾರ್ಯಕ್ರಮವನ್ನು ನಿವಾಸಿಗಳೇ ನಿರ್ವಹಿಸುತ್ತಿದ್ದಾರೆ. ಕೆಲವು ಅಪಾರ್ಟ್​ವೆುಂಟ್​ಗಳಲ್ಲಿ ಭದ್ರತಾ ಸಿಬ್ಬಂದಿಯೂ ರಜೆ ಹಾಕಿದ್ದು, ನಿವಾಸಿಗಳೇ ಪಾಳಿಯಲ್ಲಿ ಆ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net