ಶಿರೂರು ಬಳಿ ಪ್ರತಿಬಂಧಕಾಜ್ಞೆ

DC KARWAR
Published on

ಕಾರವಾರ: ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ಗುಡ್ಡ ಕುಸಿತ ಸ್ಥಳದಲ್ಲಿ ವಾಹನ ನಿಲ್ಲಿಸುವಂತಿಲ್ಲ. ಫೋಟೋ ಹೊಡೆಯುವಂತಿಲ್ಲ. ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ನದಿಗೆ ಇಳಿಯುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

2024 ನೇ ಸಾಲಿನಲ್ಲಿ ಜುಲೈ 16 ರಂದು ಅಂಕೋಲಾ ತಾಲೂಕಿನ ಬಳಲೆ ಹೋಬಳಿ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಶಿರೂರು ಗ್ರಾಮ ವ್ಯಾಪ್ತಿಯ 147+300 ರಿಂದ ಕೋಡ್ಸಣಿ ಗ್ರಾಮದ ವ್ಯಾಪ್ತಿಯ 148+800 ಚೈನೆಜ್ ನಡುವೆ ಭಾರಿ ಗುಡ್ಡ ಕುಸಿತ ಉಂಟಾಗಿ 10 ಜನ ಮೃತಪಟ್ಟಿದ್ದು 2 ಕಾಣೆಯಾಗಿದ್ದು, ಇದು ಗುಡ್ಡ ಕುಸಿತದ ಸೂಕ್ಷ್ಮ ಪ್ರದೇಶವಾಗಿದೆ.

ಈ ವರ್ಷ  ಮಳೆಗಾಲವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂಕೋಲಾ ತಹಸೀಲ್ದಾರರು ಸ್ಥಳ ಪರಿಶೀಲನೆ ಕೈಗೊಂಡ ಅವಧಿಯಲ್ಲಿ ಗುಡ್ಡದ ಕೆಲವು ಭಾಗಗಳಲ್ಲಿ ಮಣ್ಣು ಸಡಿಲುಗೊಂಡು ನೆಲಕ್ಕೆ ಉರುಳುತ್ತಿರುವುದು ಕಂಡುಬಂದಿದ್ದು, ಈ ವರ್ಷ ಸಹ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಎಲ್ಲ ಸಾಧ್ಯತೆಗಳು ಇರುತ್ತದೆ. ಪ್ರಸ್ತುತ ಈ ಸ್ಥಳದಲ್ಲಿ ಹಲವಾರು ಟ್ರಕ್‌ಗಳು ಹಾಗೂ ಕೆಲ ಪ್ರವಾಸಿಗರು ಈ ಪ್ರದೇಶದಲ್ಲಿ ನಿಂತು ಫೋಟೋಗಳನ್ನು ತೆಗೆಯುವುದು ನದಿಯ ನೀರಿನಲ್ಲಿ ಸ್ನಾನ ಮಾಡುವುದು ಅಥವಾ ವಾಹನ ನಿಲ್ಲಿಸಿ ಅದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಪ್ರಾರಂಭಗೊ0ಡಿರುವುದರಿ0ದ ಹಾಗೂ ಹವಾಮಾನ ರೆಡ್ ಆಲರ್ಟ ಘೋಷಣೆ ಮಾಡಿರುವುದರಿಂದ ಮತ್ತು ಮುಂಗಾರು ಸಹ ಶೀಘ್ರದಲ್ಲಿ ಆರಂಭಗೊಳ್ಳುವುದರಿಂದ ಅಂಕೋಲಾ ತಾಲೂಕಿನ ಬಳಲೆ ಹೋಬಳಿಯ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಚೈನೇಜ್ 147+300 ರಿಂದ 148+800 ವರೆಗಿನ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಹಾಗೂ ಅದರ ಮುಂಭಾಗದಲ್ಲಿ ಇರುವ ಗಂಗಾವಳಿ ನದಿಯ ವ್ಯಾಪ್ತಿಯನ್ನು ಆಪಾಯಕಾರಿ ವಲಯವೆಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಘೋಷಿಸುತ್ತಿರುವುದಾಗಿ ಡಿಸಿ ತಿಳಿಸಿದ್ದಾರೆ. ಅಲ್ಲದೇ ಈ ಆದೇಶವು ಮಳೆಗಾಲ ಪೂರ್ಣವಾಗುವವರೆಗೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net