

ಹನೂರು: ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದ ಪುರಾತನ ಶ್ರೀರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ ಭಾನುವಾರ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಶಾಸಕರು ಮಾತನಾಡಿ, ಆಲಂಬಾಡಿ ಜುಂಜೇಗೌಡರು ನಿರ್ಮಿಸಿದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ಶೈಲಿಯಲ್ಲಿಯೇ ಗ್ರಾಮದಲ್ಲಿ ಸುಮಾರು 400 ವರ್ಷಗಳ ಹಿಂದೆ ಶ್ರೀರಂಗನಾಥಸ್ವಾಮಿ ದೇಗುಲವನ್ನು ನಿರ್ಮಿಸಿದ್ದು, ಜನರಿಗೆ ಅನುಕೂಲ ಕಲ್ಪಿಸಿದ್ದರು. ಇದು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಆದರೆ ನಿರ್ವಹಣೆ ಇಲ್ಲದ ಪರಿಣಾಮ ದೇಗುಲವು ಸಂಪೂರ್ಣ ಶಿಥಿಲಗೊಂಡಿತ್ತು. ದೇಗುಲವನ್ನು ಅಭಿವೃದ್ಧಿ ಪಡಿಸುವಂತೆ ಜನರು ಒತ್ತಾಯಿಸಿದ್ದರು. ಹೀಗಾಗಿ ಇದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು. ಇದೀಗ ಪುರಾತತ್ವ ಇಲಾಖೆಯಿಂದ 3.36 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಗುಲದ ವೈಭವ ಮತ್ತೆ ಮರುಕಳುಹಿಸಲಿದೆ. ಜುಂಜೇಗೌಡರ ದೂರದೃಷ್ಟಿಗೆ ಸಾರ್ಥಕತೆ ತರಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ದೇಗುಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲಾಗುವುದು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗುವುದು. ಆದ್ದರಿಂದ ಜವಾಬ್ದಾರಿ ಹೊತ್ತವರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುವುದರ ಮೂಲಕ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಇಂಜಿನಿಯರ್ ಬಿ.ಎಚ್.ಅಂಬರೀಶ್, ಚಿಕ್ಕಬಳ್ಳಾಪುರ ಸಿಇಒ ಆನಂದ್, ಗ್ರಾಪಂ ಅಧ್ಯಕ್ಷೆ ಸೆಲ್ವಿ, ಮಾಜಿ ಅಧ್ಯಕ್ಷೆ ಪಾಪತಿ, ಸದಸ್ಯರಾದ ಡಿ.ಕೆ ರಾಜು, ಜಯರಾಮ್, ಪಿಡಿಒ ರಾಜಕುಮಾರ್, ಮುಖಂಡರಾದ ಮನೋಹರ್, ಮಹದೇವ, ಪಳನಿಸ್ವಾಮಿ, ಮಂಜೇಶ್, ಜೆಸ್ಸಿಂಪಾಷ, ಹುಚ್ಚಯ್ಯ, ಸುರೇಶ್, ದೊರೆಸ್ವಾಮಿ ಹಾಗೂ ಇನ್ನಿತರರು ಇದ್ದರು.