

ಯಳಂದೂರು: ಪಟ್ಟಣದ ಕೆ.ಕೆ.ರಸ್ತೆಯಲ್ಲಿರುವ ಮದ್ದೂರಮ್ಮ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ನಡೆಯಿತು.
ನೂರಾರು ವರ್ಷಗಳ ಐತಿಹಾಸ ಇರುವ ಈ ದೇಗುಲವು ಶಿಥಿಲಗೊಂಡಿತ್ತು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಇದನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಮೊದಲಿದ್ದ ಅಲ್ಪ ಜಾಗದಲ್ಲೇ ನಿರ್ಮಾಣ ಮಾಡಲು ಭಕ್ತರು ತೀರ್ಮಾನಿಸಿ ದಾನಿಗಳ ನೆರವಿನಿಂದ ಜೀರ್ಣೋದ್ಧಾರ ಮಾಡಿ ನೂತನ ಕಟ್ಟಡವನ್ನು ನಿರ್ಮಿಸಿದ್ದರು. ಬೆಳಿಗ್ಗೆಯಿಂದಲೇ ವಾಸ್ತು ಹೋಮ, ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ನಾಗಶಯನ ಭಟ್ ತಂಡದ ಸದಸ್ಯರು ನೆರವೇರಿಸಿದರು.
ನಂತರ ಅನತಿ ದೂರದಲ್ಲೇ ಇರುವ ಕಾಳಿಕಾಂಬ ದೇಗುಲದಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ದೇಗುಲದಲ್ಲಿ ಪ್ರತಿ ಗುರುವಾರ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ಗೌರಿ ಹಬ್ಬದಂದು ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇದೆ. ಜೀರ್ಣೋದ್ಧಾರದ ಧಾರ್ಮಿಕ ವಿಧಿಯ ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಮಹೇಶ್, ಮುಖಂಡರಾದ ರಾಜಪ್ಪ, ಬಸವನಾಯಕ, ಚಂದ್ರಶೇಖರ್, ರವಿ, ಕಾರ್‌ನಾಗಣ್ಣ, ಅನಂತರಾಮು, ಹನುಮಂತನಾಯಕ, ರಾಮನಾಯಕ, ಮಹದೇವನಾಯಕ, ಶಂಕರಮೂರ್ತಿ, ರಂಗನಾಥ, ರಘು, ಸುಧಾಕರ, ನಾಗೇಂದ್ರ, ಮಂಜು ಸೇರಿದಂತೆ ಹಲವರು ಇದ್ದರು.