

ಗುಂಡ್ಲುಪೇಟೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ, ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಗ್ರಾಮಸ್ಥರು ಆರಂಭಿಸಿದ್ದಾರೆ.
ಹೊಯ್ಸಳ, ಗಂಗ, ಚೋಳ, ಉಮ್ಮತ್ತೂರು ಪಾಳೆಯಗಾರರು, ಮೈಸೂರು ಅರಸರ ಆಳ್ವಿಕೆಯಲ್ಲಿ ಗ್ರಾಮದಲ್ಲಿ 101 ದೇವಾಲಯಗಳನ್ನು ನಿರ್ಮಿಸಿದ್ದ ಬಗ್ಗೆ ದಾಖಲೆಗಳಿದ್ದು ದೇವಾಲಯಗಳ ಸಂಕೀರ್ಣ ಎಂದು ಕರೆಯಲಾಗುತ್ತಿತ್ತು. ಕಾಲಾಂತರದಲ್ಲಿ ಇವುಗಳಲ್ಲಿ ಬಹಳಷ್ಟು ದೇವಾಲಯಗಳು ಶಿಥಿಲವಾಗಿದ್ದಲ್ಲದೆ ಹಲವಾರು ದೇವಸ್ಥಾನಗಳು ಮಣ್ಣಿನಲ್ಲಿ ಹೂತುಹೋಗಿವೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಪ್ರಮುಖ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಗ್ರಾಮದ ಗತವೈಭವವನ್ನು ಮರಳಿಸಲು ಮುಂದಾಗಿದ್ದಾರೆ.
ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಲಕ್ಷ್ಮೀವರದರಾಜಸ್ವಾಮಿ ದೇವಾಲಯ ಹಾಗೂ ಮೂಲಸ್ಥಾನೇಶ್ವರಸ್ವಾಮಿ ದೇವಾಲಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ನೆರವಿನಿಂದ ಜೀರ್ಣೋದ್ಧಾರಗೊಳಿಸಲಾಗಿದೆ. ಅಲ್ಲದೆ 2010ರಲ್ಲಿ ಗ್ರಾಮಸ್ಥರು ನೂತನ ರಥ ನಿರ್ಮಿಸಿದ ನಂತರ ಪ್ರತಿ ವರ್ಷವೂ ರಥೋತ್ಸವ ನಡೆಸಲಾಗುತ್ತಿದ್ದು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಪಾಲ್ಗೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇರಿತರಾದ ಗ್ರಾಮಸ್ಥರು ಕಳೆದ ವರ್ಷ ಕೊತ್ತಲಮಾರಮ್ಮ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರೆ, ಗ್ರಾಮದ ಹೊರವಲಯದಲ್ಲಿರುವ ಕಂಪಣಕಟ್ಟೆ ಮಹದೇಶ್ವರ ದೇವಸ್ಥಾನವನ್ನು ತೆರಕಣಾಂಬಿ ಮಠದ ಕುಟುಂಬದವರು ಜೀರ್ಣೋದ್ಧಾರಗೊಳಿಸಿ ಕಾಲಕಾಲಕ್ಕೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ.
ಸದ್ಯ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯ, ಸೋಮೇಶ್ವರ, ವೀರಭದ್ರೇಶ್ವರ, ಹಂಡೇಗೋಪಾಲಸ್ವಾಮಿ, ಆಂಜನೇಯ, ಮೂಲಸ್ಥಾನೇಶ್ವರ, ಕಂಠೀರವ ಆಂಜನೇಯ, ಕೊತ್ತಲಮಾರಮ್ಮ, ಕಾಡಬಸವೇಶ್ವರ ಮುಂತಾದ ಕೆಲವೆ ದೇವಾಲಯಗಳಲ್ಲಿ ಮಾತ್ರ ಪೂಜಾ ಕೈಂಕರ್ಯ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅತಿಕ್ರಮಣಕ್ಕೊಳಗಾಗಿರುವ ರಾಮಭದ್ರ, ಬಂಡಿಕೇರಿ ವೆಂಕಟರಮಣಸ್ವಾಮಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ.
1420ರಲ್ಲಿ ನಿರ್ಮಾಣವಾಗಿದೆ ಎನ್ನಲಾಗುವ ಶ್ರೀ ವೀರಭದ್ರಸ್ವಾಮಿ ದೇವಾಲಯ ನೆಲಮಟ್ಟಕ್ಕಿಂತ ಕೆಳಗಿಳಿದಿತ್ತು. ಶಿಥಿಲವಾಗಿದ್ದ ಕಟ್ಟಡದಲ್ಲಿ ಮಳೆ ನೀರು ಒಳಗೆ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು ವೀರಭದ್ರಸ್ವಾಮಿ ದೇವರ ಒಕ್ಕಲಿನವರು ಮತ್ತು ರಾಜ್ಯದ ನಾನಾ ಭಾಗಗಳಲ್ಲಿರುವ ಭಕ್ತರ ನೆರವಿನಿಂದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಕೈಗೆತ್ತಿಕೊಂಡಿದ್ದು ಧಾರ್ಮಿಕ ಕಾರ್ಯದ ಮೂಲಕ ಮೂಲ ವಿಗ್ರಹವನ್ನು ಸ್ಥಳಾಂತರಿಸಲಾಗಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಹಂಡೇ ಗೋಪಾಲಸ್ವಾಮಿ ದೇವಾಲಯ ಪ್ರಾಚ್ಯಕಲಾಭ್ಯಾಸದ ದೃಷ್ಟಿಯಿಂದ ಮಹತ್ವದ್ದಾಗಿದೆ. ಅತ್ಯಂತ ಶಿಥಿಲವಾಗಿದ್ದ ದೇವಾಲಯವನ್ನು 1984ರಲ್ಲಿ ಭಕ್ತರ ನೆರವಿನಿಂದ ಸಣ್ಣಪ್ರಮಾಣದಲ್ಲಿ ರಿಪೇರಿ ಮಾಡಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ. ಕಲಾತ್ಮಕ ಕೆತ್ತನೆಯಿಂದ ಕೂಡಿರುವ ದೇವಾಲಯವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ನೆರವಿನಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.
ಹಿಂದೆ ಮೈಸೂರು ಅರಸರ ಆಳ್ವಿಕೆಯಲ್ಲಿ ರತ್ನಪುರಿಪಟ್ಟಣ ಎಂದು ಕರೆಯಲಾಗುತ್ತಿದ್ದ ಗ್ರಾಮದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈಭವವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಸಲುವಾಗಿ ಗ್ರಾಮಸ್ಥರು ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕೈಗೊಂಡಿದ್ದಾರೆ. ಗ್ರಾಮದ ಪುರಾತನ ದೇವಾಲಯಗಳ ಬಗ್ಗೆ ವಿಶೇಷ ಆಸಕ್ತಿಯಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಅನುದಾನ ನೀಡಲು ಒಪ್ಪಿದ್ದಾರೆ. ಅಲ್ಲದೆ ನೆರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನೆಲೆಸಿರುವ ಆಯಾ ದೇವಾಲಯಗಳ ಒಕ್ಕಲಿನವರು, ಭಕ್ತರು ಜೀರ್ಣೋದ್ಧಾರಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಚಿನ್ನಸ್ವಾಮಪ್ಪ ಹೋಟೆಲ್ ಉದ್ಯಮಿ, ತೆರಕಣಾಂಬಿ