

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಕೋಟಿ ಬಿಲ್ವಾರ್ಚನೆ ಹಾಗೂ 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರವನ್ನು ಭಾನುವಾರ ಉದ್ಘಾಟಿಸಲಾಯಿತು.
ಗೋಕಾಕದ ಶ್ರೀ ಶಾಮಾನಂದ ಆಶ್ರಮದ ಶ್ರೀ ಅತ್ಯಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಾಪಂಚಿಕ ಚಿಂತನೆಯಿಂದ ಅಶಾಂತಿ, ಭಗವಚ್ಚಿಂತನೆಯಿಂದ ಪರಮಶಾಂತಿ ಲಭಿಸುತ್ತದೆ. ಇಂತಹ ಪರಮ ಶಾಂತಿಯನ್ನು ನೀಡುವ ಹಾಗೂ ಜ್ಯಾತ್ಯತೀತವಾಗಿ ಸರ್ವರಿಗೂ ಅದ್ವೈತ ವೇದಾಂತ ತತ್ವ ಬೋಧಿಸಿ, ನಿಜ ಸುಖದಲ್ಲಿರಿಸುವ ಏಕೈಕ ಸ್ಥಾನವೆಂದರೆ ಅದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಎಂದರು.
ಚಿಕ್ಕನಂದಿಯ ಶ್ರೀಸಿದ್ಧಾರೂಢರ ದರ್ಶನ ಪೀಠದ ಶ್ರೀ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಶ್ರೀ ಸಿದ್ಧಾರೂಢರ ಸಾನ್ನಿಧ್ಯದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ನಡಸಬೇಕೆಂಬುದು ಬಹಳ ದಿನಗಳ ಉತ್ಕಟ ಇಚ್ಛೆಯಾಗಿತ್ತು. ಹದಿನೈದು ವರ್ಷಗಳಿಂದ ನಿರ್ವಿಘ್ನವಾಗಿ ನಡೆಸಿಕೊಂಡು ಬಂದದ್ದು ಜಗದ್ಗುರು ಶ್ರೀ ಸಿದ್ಧಾರೂಢರ ಕೃಪಾಶೀರ್ವಾದ ಕಾರಣ. ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯನು ಆಲಸ್ಯದ ಬದುಕು ನಡೆಸುತ್ತಿದ್ದು, ಇದರಿಂದ ಸಮಾಜದ ಮೌಲ್ಯಗಳು ಕುಸಿದು ಹೋಗುತ್ತಿವೆ. ಎಲ್ಲರೂ ವ್ಯವಹಾರಿಕ ಬದುಕು ನಡೆಸುತ್ತಿರುವುದು ಇದಕ್ಕೆ ಕಾರಣ. ನಾವೆಲ್ಲರೂ ಉತ್ತಮ ಜೀವನ ನಡೆಸಬೇಕಾದರೆ ಇಂತಹ ಅಧ್ಯಾತ್ಮ ಶಿಬಿರಗಳಿಂದ ಮಾತ್ರ ಸಾಧ್ಯ ಎಂದರು.
ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಭಗವಚ್ಚಿಂತನ ಸಾಧನ ಶಿಬಿರದಿಂದ ನಮ್ಮಲ್ಲಿರುವ ಕೆಟ್ಟಗುಣ ಸುಟ್ಟು ಹೋಗಲಿದೆ. ಸನ್ಮಾರ್ಗ ತೋರಲಿದೆ ಎಂದರು.
ರನ್ನತಿಮ್ಮಾಪೂರದ ಶ್ರೀ ಬಸವರಾಜ ಸ್ವಾಮೀಜಿ, ಗೋಕಾಕದ ಶ್ರೀ ಆತ್ಮಾನಂದ ಸ್ವಾಮೀಜಿ, ರನ್ನ ಬೆಳಗಲಿಯ ಶ್ರೀ ಸದಾಶಿವ ಗುರೂಜಿ, ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಧರ್ಮದರ್ಶಿಗಳಾದ ಶಾಮಾನಂದ ಪೂಜೇರಿ, ಚನ್ನವೀರ ಮುಂಗರವಾಡಿ, ಸರ್ವಮಂಗಳಾ ಪಾಠಕ, ಬಾಳು ಮಗಜಿಕೊಂಡಿ, ರಮೇಶ ಬೆಳಗಾವಿ, ವಿ.ವಿ.ಮಲ್ಲಾಪೂರ, ವಿನಾಯಕ ಘೋಡ್ಕೆ, ಸಿದ್ಧನಗೌಡ ಪಾಟೀಲ, ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ ಇತರರಿದ್ದರು.